ಬಕ್ರೀದ್ ಹಬ್ಬದ ಪ್ರಯುಕ್ತ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಶಾಂತಿ ಸಭೆ ಆಯೋಜಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಸ್‌ಪಿ ಚಂದ್ರಕಾಂತ್ ನಂದರಡ್ಡಿ ಅವರು, ಪ್ರತಿಯೊಂದು ಹಬ್ಬಕ್ಕೂ ಸರ್ಕಾರದ ನಿಯಮಗಳು ಇರುತ್ತವೆ. ಅದರಂತೆ ಬಕ್ರೀದ್ ಹಬ್ಬವನ್ನೂ ನಿಯಮಾನುಸಾರ ಹಾಗೂ ಶಾಂತಿಯುತವಾಗಿ ಆಚರಿಸಬೇಕು ಎಂದು ಹೇಳಿದರು. ಹಬ್ಬದ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕದಡದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.


ಪೊಲೀಸರೊಂದಿಗೆ ಸಾರ್ವಜನಿಕರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಕುರಬಾನಿಯ ನಂತರ ಉಂಟಾಗುವ ತ್ಯಾಜ್ಯವನ್ನು ಪುರಸಭೆಯ ವಾಹನಗಳಲ್ಲೇ ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಮಾಜದ ಮುಖಂಡರು ಮಾತನಾಡಿ, ಯಾವುದೇ ಪ್ರಚೋದನಾತ್ಮಕ ವಿಚಾರಗಳಿಗೆ ಒಳಗಾಗದೆ ಸ್ನೇಹ, ಸಹೋದರತ್ವ ಮತ್ತು ಸಾಮರಸ್ಯದ ಭಾವನೆಯೊಂದಿಗೆ ಹಬ್ಬ ಆಚರಿಸಬೇಕು ಎಂದು ಕರೆ ನೀಡಿದರು. ಹಿಂದೂ-ಮುಸ್ಲಿಂ ಎಂಬ ಭೇದಭಾವವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಹಬ್ಬ ಆಚರಿಸೋಣ ಎಂದು ತಿಳಿಸಿದರು.

ಪಿಐ ಗುರುಶಾಂತ ದಾಶ್ಯಾಳ ಮಾತನಾಡಿ, ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ತಕ್ಷಣ ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೊಲೀಸ್ ಇಲಾಖೆ ಪ್ರತಿಯೊಂದು ಚಟುವಟಿಕೆಗಳ ಮೇಲೂ ನಿಗಾ ವಹಿಸಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಬ್ಬರ ನದಾಫ್, ಸಿ.ಜೆ. ವಿಜಯಕರ, ಗುರು ಕಮಲ್ ಸಾಬ್ ಕೊರ್ಬು, ಗುಡಿಮನಿ, ಸಿದ್ರಾಮ ಪಾತರೊಟ್ಟಿ, ರೀಯಾಜ್ ಡೋಣೂರ, ಮತಾಬ್ ಬಮ್ಮನ್ನಳ್ಳಿ, ಬಸನಗೌಡ ಪಾಟೀಲ, ಮೈಬೂಬ ನಾಯ್ಕೋಡಿ, ಪರಶುರಾಮ ದೊಡಮನಿ, ಶ್ರೀಶೈಲ್ ಹೆಬ್ಬಾಳ, ಮಲ್ಲಿಕಾರ್ಜುನ ಪೂಜಾರಿ, ಅದಮ್ಮಸಾಬ್ ಡವಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
