ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಇಂದು ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿದೆ. ಸಂಸದ ಜಗದೀಶ್ ಶೆಟ್ಟರ್ ಅವರ ಕಚೇರಿಗೆ ಬೀಗ ಜಡಿಯಲು ಯತ್ನಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೂಡ ನಡೆದಿದೆ.


ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ಇಂದು ಬೆಳಗಾವಿಯಲ್ಲಿ ಯುವಾ ಕಾಂಗ್ರೆಸ್’ನ ವತಿಯಿಂದ ಸಂಸದ ಜಗದೀಶ ಶೆಟ್ಟರ್ ಅವರ ಕಚೇರಿಯ ಎದುರು ಉಗ್ರ ಪ್ರತಿಭಟನೆಯನ್ನು ನಡೆಸಲಾಯಿತು. ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ಇಂದು ಬೆಳಗಾವಿ ಜಿಲ್ಲಾ ಮತ್ತು ಗ್ರಾಮೀಣ ಯುವಾ ಕಾಂಗ್ರೆಸ್’ನ ವತಿಯಿಂದ ಗ್ರಾಮೀಣಾಧ್ಯಕ್ಷ ಕಾರ್ತಿಕ್ ಪಾಟೀಲ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ. ಬೆಳಗಾವಿಯ ಸಂಸದ ಜಗದೀಶ್ ಶೆಟ್ಟರ್ ಅವರ ಕಚೇರಿಗೆ ಬೀಗ ಜಡಿದು, ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಈಗ 18ನೇ ಬಾರಿ ಸೋರಿಕೆಯಾಗಿದೆ. ಇದಕ್ಕೆ ಬಿಜೆಪಿ ಸರ್ಕಾರವೇ ಹೊಣೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳ ಸಮಯ ಮತ್ತು ಪರಿಶ್ರಮ ವ್ಯರ್ಥವಾಗಿದೆ ಎಂದು ಯುವಾ ಕಾಂಗ್ರೆಸ್ ರಾಜ್ಯಾದ್ಯಕ್ಷ ಅಬ್ದುಲ್ ದೇಸಾಯಿ ಆರೋಪಿಸಿದರು.

ಇನ್ನು ಸಂಸದ ಜಗದೀಶ್ ಶೆಟ್ಟರ್ ಅವರ ಕಚೇರಿಯ ಒಳಗೆ ಪ್ರವೇಶ ನೀಡುವಂತೆ ಪಟ್ಟು ಹಿಡಿದು ಕೆಲ ಕಾಲ ರಸ್ತೆಯ ಮೇಲೆಯೇ ಕುಳಿತು ಧರಣಿಯನ್ನು ನಡೆಸಿದರು. ಇದರಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸರು ಹಾಕಿರುವ ಬ್ಯಾರಿಕೇಡ್ಸ್ ತಳ್ಳಿ ಸಂಸದ ಶೆಟ್ಟರ್ ಕಚೇರಿಗೆ ಬೀಗ ಜಡಿಯಲು ಮುಂದಾದ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಸುಮಾರು 20ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಪೊಲೀಸ್ ವ್ಯಾನ್’ನಲ್ಲಿಯೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
