Bagalkot

“ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್ ಪಡೆದಿದ್ದರಲ್ಲಿ ಜಾತಿ ಧರ್ಮ ಎಲ್ಲಿದೆ?

Share

ಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಪ್ರಕರಣದ ಕೇಸ್ ಹಿಂತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಡುತ್ತಿರುವ ಮುಸ್ಲಿಂ ತುಷ್ಟೀಕರಣದ ಆರೋಪಕ್ಕೆ ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ತೀವ್ರ ತಿರುಗೇಟು ನೀಡಿದ್ದಾರೆ. ಇದೇ ವೇಳೆ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ರಾಜ್ಯದ ಸಿಎಂ ಬದಲಾವಣೆ ಗೊಂದಲದ ಕುರಿತಾಗಿಯೂ ಅವರು ಬಿಜೆಪಿಗೆ ಖಾರವಾಗಿ ಉತ್ತರಿಸಿದ್ದಾರೆ. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ದರ್ಗಾ ಗಲಾಟೆ ಕೇಸ್ ಹಿಂಪಡೆದಿರುವುದನ್ನು ಸಮರ್ಥಿಸಿಕೊಂಡ ಸಚಿವ ಆರ್. ಬಿ. ತಿಮ್ಮಾಪುರ, “ನಾವು ಈ ಹಿಂದೆ ಎಂಟರಿಂದ ಒಂಬತ್ತು ರೈತರ ಕೇಸುಗಳನ್ನೂ ವಾಪಸ್ ಪಡೆದಿದ್ದೇವೆ, ಆಗ ಅಲ್ಲಿ ಜಾತಿ-ಧರ್ಮ ಬಂದಿತ್ತಾ? ಬಿಜೆಪಿಯವರಿಗೆ ಮುಂಜಾನೆ ಎದ್ದ ತಕ್ಷಣ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ದಂದೆಯಷ್ಟೇ ಗೊತ್ತಿದೆ” ಎಂದು ಕಿಡಿಕಾರಿದರು. ಇದೇ ವೇಳೆ ಪ್ರಧಾನಿ ಮೋದಿಯವರ ವಿದೇಶ ಪ್ರವಾಸವನ್ನು ಟೀಕಿಸಿದ ಅವರು, ನಾರ್ವೆಯಲ್ಲಿ ಪ್ರಧಾನಿ ನಡೆಗೆ ವಿಶ್ವವೇ ಛೀಮಾರಿ ಹಾಕಿದೆ ಹಾಗೂ ಅವರು ಮಾಧ್ಯಮಗಳನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ, ಪೆಟ್ರೋಲ್, ಡೀಸೆಲ್ ಮತ್ತು ಸಿಲಿಂಡರ್ ಬೆಲೆಗಳು ಗಗನಕ್ಕೇರುತ್ತಿದ್ದರೂ ಕೇಂದ್ರ ಸರ್ಕಾರ ಬೆಲೆ ಕಡಿಮೆ ಮಾಡುವ ಬದ್ಧತೆ ತೋರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಗೊಂದಲದ ಬಗ್ಗೆ ಮಾತನಾಡಿದ ಸಚಿವರು, “ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ರಾಹುಲ್ ಗಾಂಧಿಯವರು ಹೇಳುವವರೆಗೂ ಸದ್ಯದ ಪರಿಸ್ಥಿತಿಯೇ ಮುಂದುವರಿಯುತ್ತದೆ. ನಮ್ಮ ಇಬ್ಬರು ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದಾರೆ” ಎಂದು ಸ್ಪಷ್ಟಪಡಿಸಿದರು. ಈ ಗೊಂದಲಗಳಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ತೊಂದರೆಯಾಗಿಲ್ಲ, ಮುಖ್ಯಮಂತ್ರಿಗಳು ಸಮರ್ಥವಾಗಿ ಆಡಳಿತ ನಿಭಾಯಿಸುತ್ತಿದ್ದಾರೆ; ಆದಷ್ಟು ಬೇಗ ಹೈಕಮಾಂಡ್ ಈ ಎಲ್ಲ ಮಾಧ್ಯಮ ಸುದ್ದಿಗಳಿಗೆ ಇತಿಶ್ರೀ ಹಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Tags:

error: Content is protected !!