Hukkeri

ಸರ್ಕಾರಕ್ಕೆ ಹುಕ್ಕೇರಿ ರೈತರ ಅಂತಿಮ ಗಡುವು…

Share

ಹುಕ್ಕೇರಿ ತಾಲೂಕಿನ ಸಮಗ್ರ ನೀರಾವರಿ ಯೋಜನೆಗಾಗಿ ರೈತರು ಹಮ್ಮಿಕೊಂಡಿರುವ ಹೋರಾಟ ಇಂದು ಮತ್ತಷ್ಟು ತೀವ್ರಗೊಂಡಿದೆ. ನೀರಾವರಿಯಿಂದ ವಂಚಿತವಾಗಿರುವ 30-40 ಗ್ರಾಮಗಳಿಗೆ ತಕ್ಷಣ ನೀರು ಒದಗಿಸದಿದ್ದರೆ ಹಿಡಕಲ್ ಡ್ಯಾಂ ಪೈಪ್ ಒಡೆದು ಹೋರಾಟ ಮಾಡುವುದಾಗಿ ರೈತರು ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.

ಹುಕ್ಕೇರಿ ಮತ್ತು ಯಮಕನಮರ್ಡಿ ಮತಕ್ಷೇತ್ರಗಳ ನೀರಾವರಿ ವಂಚಿತ ಗ್ರಾಮಗಳಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಇಂದು ಕೂಡ ಮುಂದುವರೆದಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಹೋರಾಟಗಾರ ಶಶಿಕಾಂತ ಗುರೂಜಿ, “ನಮ್ಮ ಸ್ಥಿತಿ ಕೆಳಗೆ ಬೆಂಕಿ, ತಲೆ ಮೇಲೆ ನೀರಿನ ಬುಟ್ಟಿ ಇದ್ದಂತಾಗಿದೆ. ಜನಜಾನುವಾರುಗಳಿಗೆ ನೀರು ನೀಡದೆ ಕೈಗಾರಿಕೆಗಳಿಗೆ ಹರಿಸುತ್ತಿರುವುದು ಖಂಡನೀಯ. ಸರ್ಕಾರ ಸಂಜೆಯೊಳಗೆ ಸೂಕ್ತ ನಿರ್ಧಾರ ಪ್ರಕಟಿಸದಿದ್ದರೆ ಪ್ರತಿಭಟನೆ ತೀವ್ರಗೊಳ್ಳಲಿದೆ” ಎಂದು ಎಚ್ಚರಿಸಿದರು. ಅಲ್ಲದೆ, ಬಬಲೇಶ್ವರ ಕ್ಷೇತ್ರದಲ್ಲಿ ಎಂ.ಬಿ. ಪಾಟೀಲರು ನೀರಾವರಿ ತಂದಂತೆ ಈ ಭಾಗಕ್ಕೂ ನೀರು ತಂದರೆ ಸಚಿವರನ್ನು ರೈತರು ಬೆಳೆಯಲ್ಲಿ ತುಲಾಭಾರ ಮಾಡಲಿದ್ದಾರೆ, ಇಲ್ಲದಿದ್ದರೆ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ನ್ಯಾಯ ಸಿಗದಿದ್ದರೆ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಎಚ್ಚರಿಸಿದ ಅವರು, ನಾಳೆ ಹುಕ್ಕೇರಿ ಹಾಗೂ ಯಮಕನಮರ್ಡಿ ಸ್ವಯಂಪ್ರೇರಿತ ಬಂದ್ ಆಗಲಿದ್ದು, ಮುಂದೆ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯ ಬಂದ್‌ಗೆ ಕರೆ ನೀಡಲಾಗುವುದು ಎಂದರು. ಬೇಡಿಕೆ ಈಡೇರದಿದ್ದರೆ ರಾಜ್ಯದ 224 ಶಾಸಕರ ಮನೆ ಮುಂದೆ ತಮಟೆ ಬಾರಿಸಿ ಪ್ರತಿಭಟಿಸುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿಗಳು ಹಾಗೂ ನೀರಾವರಿ ಇಲಾಖೆಯ ಮುಖ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಒಪ್ಪಿಗೆ ನೀಡುವವರೆಗೂ ಹೋರಾಟ ಹಿಂಪಡೆಯುವುದಿಲ್ಲ. ಒಂದು ವೇಳೆ ಅಧಿಕಾರಿಗಳನ್ನು ತಡೆದರೆ, ಕೇವಲ 15 ಕಿಲೋಮೀಟರ್ ದೂರದಲ್ಲಿರುವ ಹಿಡಕಲ್ ಡ್ಯಾಂಗೆ ಪಾದಯಾತ್ರೆ ನಡೆಸಿ ಪೈಪ್‌ಲೈನ್‌ಗಳನ್ನು ಒಡೆದು ಹಾಕುತ್ತೇವೆ, ಇದಕ್ಕಾಗಿ ನಮ್ಮ ಮೇಲೆ ಸಾವಿರ ಕೇಸ್ ಹಾಕಿದರೂ ಎದುರಿಸಲು ಸಿದ್ಧ ಎಂದು ಹೋರಾಟಗಾರರು ಸರ್ಕಾರಕ್ಕೆ ಕಡಕ್ ಸಂದೇಶ ರವಾನಿಸಿದ್ದಾರೆ.

Tags:

error: Content is protected !!