BELAGAVI

ಬೆಳಗಾವಿ ಗಡಿ ಹೋರಾಟಕ್ಕೆ ತೀವ್ರಗೊಳಿಸಲು ಎಂ.ಇ.ಎಸ್. ನಿರ್ಧಾರ

Share

ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅತ್ಯಂತ ಪ್ರಮುಖ ಸಭೆ ಜರುಗಿತು. ಗಡಿ ವಿವಾದದ ಕಾನೂನು ಹೋರಾಟ ಹಾಗೂ ಕನ್ನಡ ಸಂಘಟನೆಗಳ ವಿರುದ್ಧ ಮುಂದಿನ ದಿನಗಳಲ್ಲಿ ತೀವ್ರ ಪ್ರತಿಭಟನೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಬೆಳಗಾವಿಯ ಮರಾಠಾ ಮಂದಿರದಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಧ್ಯಕ್ಷ ಪ್ರಕಾಶ್ ಮರಗಾಳೆ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಪ್ರಮುಖವಾಗಿ ನಾಲ್ಕು ವಿಷಯಗಳ ಕುರಿತು ಚರ್ಚಿಸಲಾಯಿತು. ಬರುವ ಜೂನ್ 1 ರಂದು ಹಮ್ಮಿಕೊಳ್ಳಲಿರುವ ಹುತಾತ್ಮ ದಿನಾಚರಣೆಯ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಕನ್ನಡ ಸಂಘಟನೆಗಳ ಚಟುವಟಿಕೆಗಳನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬೃಹತ್ ಮೋರ್ಚಾ ನಡೆಸಲು ತೀರ್ಮಾನಿಸಲಾಗಿದ್ದು, ಮೇ 30 ರೊಳಗಾಗಿ ಸಮಿತಿಯ ಎಲ್ಲಾ ಘಟಕಗಳ ಸಭೆ ಕರೆದು ಪ್ರತಿಭಟನೆಯ ಅಂತಿಮ ದಿನಾಂಕವನ್ನು ಘೋಷಿಸಲಾಗುವುದು ಎಂದು ಮರಗಾಳೆ ತಿಳಿಸಿದರು.

ಮಹಾರಾಷ್ಟ್ರ ಸರ್ಕಾರವು ಗಡಿ ವಿಚಾರದಲ್ಲಿ ತೋರುತ್ತಿರುವ ಉದಾಸೀನತೆಯ ಬಗ್ಗೆ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತವಾಯಿತು. ಕಳೆದ ಎರಡು ವರ್ಷಗಳಿಂದ ಗಡಿ ಉನ್ನತಾಧಿಕಾರ ಸಮಿತಿಯ ಯಾವುದೇ ಸಭೆ ನಡೆದಿಲ್ಲದ ಕಾರಣ, ಮುಂದಿನ 15 ದಿನಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಿವಾಸದ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಭಾಷಾ ಅಲ್ಪಸಂಖ್ಯಾತರ ಆಯೋಗದ ವರದಿಯಂತೆ ಬೆಳಗಾವಿಯಲ್ಲಿ ಶೇ. 20 ಕ್ಕಿಂತ ಹೆಚ್ಚು ಮರಾಠಿ ಭಾಷಿಕರಿದ್ದು, ಸರ್ಕಾರಿ ಸುತ್ತೋಲೆಗಳನ್ನು ಮರಾಠಿಯಲ್ಲೂ ನೀಡಬೇಕು ಹಾಗೂ ಸಂಸತ್ತಿನ ಮೂಲಕ ಈ ಭಾಗದ ಜನರಿಗೆ ನ್ಯಾಯ ಕೊಡಿಸಬೇಕೆಂದು ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಳ್ಳಲಾಯಿತು.

ಇದೇ ವೇಳೆ ಮಹಾನಗರ ಪಾಲಿಕೆಯಲ್ಲಿ ಕನ್ನಡ ಸಂಘಟನೆಗಳು ಗಡಿ ವಿವಾದ ವಿರೋಧಿ ನಿರ್ಣಯ ಮಂಡಿಸಲು ಮುಂದಾಗುತ್ತಿದ್ದರೂ ಎಂಇಎಸ್ ಏಕೆ ಸುಮ್ಮನಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮಾಜಿ ಮೇಯರ್ ಮಾಲೋಜಿರಾವ್ ಅಷ್ಟೇಕರ್, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಮುಂದಿನ ಹೋರಾಟ ರೂಪಿಸಲಾಗುವುದು ಎಂದರು.
ಈ ಸಭೆಯಲ್ಲಿ ಪ್ರಕಾಶ್ ಮರಗಾಳೆ, ಮನೋಹರ್ ಕಿಣೇಕರ್, ರಂಜಿತ್ ಚವ್ಹಾಣ್-ಪಾಟೀಲ್, ಮಾಲೋಜಿರಾವ್ ಅಷ್ಟೇಕರ್, ಗೋಪಾಲರಾವ್ ಪಾಟೀಲ್, ಅಮರ್ ಯೆಳ್ಳೂರ್ಕರ್, ಲಕ್ಷ್ಮಣ್ ಹೊನಗೇಕರ್, ಬಿ. ಡಿ. ಮೋಹನಗೇಕರ್, ಆರ್. ಸಿ. ಗೋದಗೇಕರ್, ಎಂ. ಜಿ. ಪಾಟೀಲ್, ಎಂ. ಬಿ. ಗುರವ್, ಲಕ್ಷ್ಮಣ್ ಪಾಟೀಲ್ ಮತ್ತು ಅಜಿತ್ ಪಾಟೀಲ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:

error: Content is protected !!