ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ಸಂಗ್ರಹ ಮತ್ತು ಮಾರಾಟ ದಂಧೆಯ ಜಾಲವನ್ನು ಅಧಿಕಾರಿಗಳು ಭೇದಿಸಿದ್ದಾರೆ. ಕೊರ್ತಿ ಪುನರ್ವಸತಿ ಕೇಂದ್ರದ ಮೇಲೆ ಜಂಟಿ ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಬೃಹತ್ ಪ್ರಮಾಣದ ಅಕ್ಕಿ ಮೂಟೆಗಳು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದೆ.


ಬೀಳಗಿ ತಾಲೂಕಿನ ಕೊರ್ತಿ ಪುನರ್ವಸತಿ ಕೇಂದ್ರದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಬೀಳಗಿ ತಹಶೀಲ್ದಾರ್ ವಿನೋದ್ ಹತ್ತಳ್ಳಿ ಅವರ ನೇತೃತ್ವದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಈ ಕಾರ್ಯಾಚರಣೆ ಕೈಗೊಂಡಿದೆ. ದಾಳಿಯ ವೇಳೆ ಅಕ್ರಮವಾಗಿ ಬಚ್ಚಿಡಲಾಗಿದ್ದ 20ಕ್ಕೂ ಹೆಚ್ಚು ಪಡಿತರ ಅಕ್ಕಿ ಮೂಟೆಗಳು, ಸಾಗಾಟಕ್ಕೆ ಬಳಸುತ್ತಿದ್ದ 3 ಬೈಕ್ಗಳು ಹಾಗೂ ಒಂದು ತೂಕದ ಮಷೀನ್ ಅನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.


ಬಂಧಿತ ಆರೋಪಿಗಳು ಸುನಗ ಎಲ್ ಟಿ 1 ಗ್ರಾಮದ ನಿವಾಸಿಗಳಾಗಿದ್ದು, ಸಾರ್ವಜನಿಕರಿಗೆ ವಿತರಿಸಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದುಬಂದಿದೆ. ದಾಳಿ ನಡೆಸಿದ ಬೆನ್ನಲ್ಲೇ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪಡಿತರ ಅಕ್ಕಿ ದಂಧೆಯ ಹಿಂದಿರುವ ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
