ರಾಜ್ಯಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕುಂದಾನಗರಿ ಬೆಳಗಾವಿಯಲ್ಲಿ ರಾಜಕೀಯ ಸಂಚಲನ ಶುರುವಾಗಿದೆ. ಬಿಜೆಪಿಯಿಂದ ಈ ಬಾರಿ ಸ್ಥಾನ ಕೈತಪ್ಪುವ ಮುನ್ಸೂಚನೆ ಸಿಗುತ್ತಿದ್ದಂತೆ, ಕಾಂಗ್ರೆಸ್‌ನಿಂದ ಬೆಳಗಾವಿ ಜಿಲ್ಲೆಗೆ ಆದ್ಯತೆ ನೀಡಬೇಕು ಎಂಬ ಒತ್ತಾಯ ಬಲವಾಗಿ ಕೇಳಿಬರುತ್ತಿದೆ.

*ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪತ್ರ:*

ನಾಡಿನ ಹಿತರಕ್ಷಣೆಗಾಗಿ ಶ್ರಮಿಸುತ್ತಿರುವ ಕನ್ನಡ ಪರ ಸಂಘಟನೆಗಳು ಜಂಟಿಯಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಬೆಳಗಾವಿ ಮೂಲದ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ *ಮೋಹನ್ ಕಾತರಕಿ* ಅವರಿಗೆ ಈ ಬಾರಿ ರಾಜ್ಯಸಭೆ ಟಿಕೆಟ್ ನೀಡಬೇಕೆಂದು ಗಂಭೀರ ಒತ್ತಾಯ ಮಾಡಿವೆ.
### * ಮೋಹನ್ ಕಾತರಕಿ ಅವರೇ ಯಾಕೆ?*
* *ನಾಲ್ಕು ದಶಕಗಳ ಹೋರಾಟ:* ನಾಡು, ನುಡಿ, ಜಲ ಮತ್ತು ಭಾಷೆಯ ವಿಚಾರದಲ್ಲಿ ಕಳೆದ 40 ವರ್ಷಗಳಿಂದ ಕರ್ನಾಟಕದ ಹಿತಾಸಕ್ತಿ ಪರ ನಿರಂತರವಾಗಿ ಧ್ವನಿ ಎತ್ತಿದ್ದಾರೆ.
* *ಕಾನೂನು ಸಮರದ ಸಾರಥಿ:* ಕರ್ನಾಟಕದ ಜೀವನಾಡಿಗಳಾದ *ಕೃಷ್ಣಾ, ಕಾವೇರಿ, ಮಹದಾಯಿ* ನದಿ ನೀರು ಹಂಚಿಕೆ ಹಾಗೂ *ಬೆಳಗಾವಿ ಗಡಿ ವಿವಾದ*ದ ಸುದೀರ್ಘ ಕಾನೂನು ಹೋರಾಟದಲ್ಲಿ ರಾಜ್ಯದ ಪರವಾಗಿ ಗಟ್ಟಿ ಧ್ವನಿಯಾಗಿ ನಿಂತು ಹಿತ ಕಾಯ್ದಿದ್ದಾರೆ.
* *ಬೆಳಗಾವಿಯ ಹೆಮ್ಮೆಯ ಸುಪುತ್ರ:*
ಗಡಿ ಜಿಲ್ಲೆಯವರೇ ಆದ ಇವರು ದೆಹಲಿ ಮಟ್ಟದಲ್ಲಿ ರಾಜ್ಯದ ಧ್ವನಿಯಾಗಲು ಅತ್ಯಂತ ಸೂಕ್ತ ಅಭ್ಯರ್ಥಿ ಎಂಬುದು ಕನ್ನಡಿಗರ ಅಭಿಪ್ರಾಯ.
* ಬೆಳಗಾವಿಯ ರಾಜ್ಯಸಭೆ ಇತಿಹಾಸ ಮತ್ತು ಈಗಿನ ಲೆಕ್ಕಾಚಾರ:*
* ಈ ಹಿಂದೆ ಬೆಳಗಾವಿ ಜಿಲ್ಲೆಗೆ *ನಾಲ್ಕು ಬಾರಿ* ರಾಜ್ಯಸಭೆ ಸ್ಥಾನ ಸಿಕ್ಕ ಇತಿಹಾಸವಿದೆ.
ಜಿಲ್ಲೆಯಿಂದ *ಡಾ. ಪ್ರಭಾಕರ ಕೋರೆ* ಹಾಗೂ ಪ್ರಸ್ತುತ *ಈರಣ್ಣ ಕಡಾಡಿ* ಅವರು ಆಯ್ಕೆಯಾಗಿದ್ದರು.ಸದ್ಯ ಈರಣ್ಣ ಕಡಾಡಿ ಅವರ ಅಧಿಕಾರ ಅವಧಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಈ ಬಾರಿ ಬಿಜೆಪಿಯ ಲೆಕ್ಕಾಚಾರವೇ ಬೇರೆಯಾಗಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಬಿಜೆಪಿಯಿಂದ ಬೆಳಗಾವಿಗೆ ಸ್ಥಾನ ಸಿಗದಿದ್ದರೆ, ಕಾಂಗ್ರೆಸ್ ಸರ್ಕಾರವು ನಾಡಿನ ಪರವಾಗಿ ಕೆಲಸ ಮಾಡಿದ ಮೋಹನ್ ಕಾತರಕಿ ಅವರಿಗೆ ಮಣೆ ಹಾಕುವ ಮೂಲಕ ಗಡಿ ಜಿಲ್ಲೆಗೆ ನ್ಯಾಯ ಒದಗಿಸಿಕೊಡಬೇಕೆಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.
