ಬೆಳಗಾವಿಯಲ್ಲಿ ಸದ್ದು ಮಾಡುತ್ತಿರುವ 4600 ಕೋಟಿ ರೂಪಾಯಿ ವಂಚನೆ ಆರೋಪ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ತಾನು ಯಾವುದೇ ದರೋಡೆ ಮಾಡಿಲ್ಲ, ಯಾರ ಕಿಸೆಯನ್ನೂ ಕತ್ತರಿಸಿಲ್ಲ ಎಂದು ಕಣ್ಣೀರಿಟ್ಟಿರುವ ಶಿವಾನಂದ ನೀಲಣ್ಣವರ, ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಯೋವೃದ್ಧೆ ಹಾಗೂ ನಿವೃತ್ತ ಸೈನಿಕನ ಭಾವುಕ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಕೋಟಿ ಕೋಟಿ ವಂಚನೆಯ ಆರೋಪ ಎದುರಿಸುತ್ತಿರುವ ಶಿವಾನಂದ ನೀಲಣ್ಣವರ ಪರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋಗಳು ಅಪ್‌ಲೋಡ್ ಆಗಿದ್ದು, ಸಂಚಲನ ಸೃಷ್ಟಿಸಿವೆ. ‘ಓಂ ನಮಃ ಶಿವಾಯ’ ಎನ್ನುತ್ತಾ ಮಾತು ಆರಂಭಿಸುವ ವಯೋವೃದ್ಧ ಮಹಿಳೆಯೊಬ್ಬರು, “ಶಿವಾನಂದ ಅವರ ಮೇಲೆ ಯಾಕೆ ಸುಳ್ಳು ಅಪವಾದ ಹೊರಿಸುತ್ತಿದ್ದೀರಿ? ಅವರು ಯಾರದ್ದೂ ಒಂದು ರೂಪಾಯಿ ತಿಂದಿಲ್ಲ, ಬಡವರಿಗೆ ಕೊಟ್ಟು ನಡೆಸುವ ಮನುಷ್ಯ. ಚಹಾ ಮಾರುತ್ತಿದ್ದ ಮೋದಿಯನ್ನೇ ಪ್ರಧಾನಿ ಮಾಡಿದ್ರಿ, ಆದರೆ ಐಸ್‌ಕ್ರೀಮ್ ಮಾರುತ್ತಿದ್ದ ಹುಡುಗನಿಗೆ ಅಪವಾದ ಮಾಡುತ್ತಿದ್ದೀರಿ” ಎಂದು ಶಿವಾನಂದ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅವರ ಹಣವನ್ನು ಕೂಡಿಟ್ಟಿದ್ದೇ ತಪ್ಪಾಯಿತೇ ಎಂದು ವೃದ್ಧೆ ಪ್ರಶ್ನಿಸಿದ್ದಾರೆ.

ಇದೇ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮತ್ತೊಂದು ವಿಡಿಯೋದಲ್ಲಿ ಭಾರತೀಯ ಸೇನೆಯ ನಿವೃತ್ತ ಸುಬೇದಾರ ನರೇಂದ್ರಕುಮಾರ್ ಎಂಬುವವರು ಶಿವಾನಂದ ಪರ ಬ್ಯಾಟ್ ಮಾಡಿದ್ದಾರೆ. “ನಿವೃತ್ತಿ ಬಳಿಕ ನಾವು ಶಿವಂ ಅಸೋಸಿಯೇಟ್ಸ್ ಜೊತೆ ಗುರುತಿಸಿಕೊಂಡಿದ್ದು, ಶಿವಾನಂದ ಅವರು ನಮಗೆ ಉತ್ತಮ ಜೀವನ ಕಲ್ಪಿಸಿಕೊಟ್ಟಿದ್ದಾರೆ. ನಿವೃತ್ತಿಯ ನಂತರ ಸೇನೆಯಲ್ಲಿದ್ದ ಗೌರವದ ಕೆಲಸ ನಮಗೆ ಬೇರೆಲ್ಲೂ ಸಿಗುವುದಿಲ್ಲ, ನಾವಿಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ತನಿಖೆಯ ಹಂತದಲ್ಲಿರುವ ವಂಚನೆ ಪ್ರಕರಣಕ್ಕೆ ಹೊಸ ಆಯಾಮ ನೀಡಿವೆ.
