• ಜಿಪಂ ಸಿಇಓ ಶಶಿಧರ ಕುರೇರ್‌ಗೆ ಬಿಳ್ಕೊಡುಗೆ
• ತೆರೆದ ವಾಹನದಲ್ಲಿ ಅದ್ಭುತ ವಿಜಯೋತ್ಸವ ಮೆರವಣಿಗೆ
• ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿ ಕುರೇರ್ ವರ್ಗಾವಣೆ
• ಡಾಕ್ಯುಮೆಂಟರಿ ಕಂಡು ಕಣ್ಣೀರಿಟ್ಟ ಜಿಪಂ ಸಿಬ್ಬಂದಿ
ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಕುರೇರ್ ಅವರಿಗೆ ಜಿಪಂ ಸಿಬ್ಬಂದಿ ಹಾಗೂ ಅಭಿಮಾನಿಗಳು ರಾಜಾತಿಥ್ಯದೊಂದಿಗೆ ಅದ್ದೂರಿ ಹಾಗೂ ಹೃದಯಸ್ಪರ್ಶಿ ಬಿಳ್ಕೊಡುಗೆ ನೀಡಿದ್ದಾರೆ. ಸದ್ಯ ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆಗೊಂಡಿರುವ ಶಶಿಧರ ಕುರೇರ್ ಅವರ ವಿದಾಯದ ವೇಳೆ ಇಡೀ ಸಭಾಂಗಣವೇ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಬಾಗಲಕೋಟೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಈ ಬಿಳ್ಕೊಡುಗೆ ಸಮಾರಂಭ ಅತ್ಯಂತ ವೈಭವೋಪೇತವಾಗಿ ಜರುಗಿತು. ವರ್ಗಾವಣೆಗೊಂಡ ಸಿಇಓ ಶಶಿಧರ ಕುರೇರ್ ಅವರನ್ನು ತೆರೆದ ವಾಹನದಲ್ಲಿ ಕೂರಿಸಿ, ಜಿಪಂ ಆವರಣದಿಂದ ಸಭಾಭವನದವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಡೊಳ್ಳು ಹಾಗೂ ಮಜಲು ವಾದ್ಯಗಳ ನಿನಾದ ಮೊಳಗಿತು. ಕುರೇರ್ ಅವರು ಸಭಾಂಗಣ ಪ್ರವೇಶಿಸುತ್ತಿದ್ದಂತೆ ಸಿಬ್ಬಂದಿ ಮತ್ತು ಅಭಿಮಾನಿಗಳು ಭರಪೂರ ಹೂಮಳೆ ಸುರಿಸಿ, ಜೈಕಾರ ಹಾಕುತ್ತಾ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶಶಿಧರ ಕುರೇರ್ ಅವರು ಬಾಗಲಕೋಟೆಯಲ್ಲಿ ಮಾಡಿದ ಜನಪರ ಕೆಲಸಗಳು ಮತ್ತು ಸಾಧನೆಗಳ ಕುರಿತು ಸಿದ್ಧಪಡಿಸಲಾಗಿದ್ದ ವಿಶೇಷ ಡಾಕ್ಯುಮೆಂಟರಿಯನ್ನು ಪ್ರಸಾರ ಮಾಡಲಾಯಿತು. ಈ ಸಾಕ್ಷ್ಯಚಿತ್ರ ಪ್ರಸಾರವಾಗುತ್ತಿದ್ದಂತೆ ಜಿಪಂ ಸಭಾಂಗಣದಲ್ಲಿದ್ದ ಸಹೋದ್ಯೋಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ನೆಚ್ಚಿನ ಅಧಿಕಾರಿಯ ನೆನಪಿನಲ್ಲಿ ಕಣ್ಣೀರನ್ನಿಟ್ಟು ಭಾವುಕರಾದರು. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಜನಪ್ರಿಯ ಅಧಿಕಾರಿಗೆ ಇಡೀ ಜಿಲ್ಲಾ ಪಂಚಾಯತ್ ಒಮ್ಮನಸ್ಸಿನಿಂದ ಗೌರವಪೂರ್ವಕ ಹಾಗೂ ಸಾರ್ಥಕ ವಿದಾಯ ಹೇಳಿತು.

