Belagavi

ಆನ್‌ಲೈನ್ ಫಾರ್ಮಸಿ ಬಂದ್ ಮಾಡಿ… ಬೆಳಗಾವಿಯಲ್ಲಿ ಔಷಧಿ ವ್ಯಾಪಾರಿಗಳಿಂದ ಪ್ರತಿಭಟನೆ

Share

• ಆನ್‌ಲೈನ್ ಫಾರ್ಮಸಿ ಬಂದ್ ಮಾಡಲು ಆಗ್ರಹ
• ಬೆಳಗಾವಿ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ
• ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ನಿಷೇಧ
• ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ

ಇಂಟರ್ನೆಟ್‌ನಲ್ಲಿ ಯಾವುದೇ ನಿಯಂತ್ರಣವಿಲ್ಲದೆ ಸಾಗುತ್ತಿರುವ ಆನ್‌ಲೈನ್ ಔಷಧ ಮಾರಾಟದ ವಿರುದ್ಧ ಬೆಳಗಾವಿಯಲ್ಲಿ ಸಿಡಿದೆದ್ದಿದ್ದಾರೆ ಮೆಡಿಕಲ್ ಶಾಪ್ ಮಾಲೀಕರು. ಇ-ಫಾರ್ಮಸಿಗಳಿಂದಾಗಿ ಯುವ ಪೀಳಿಗೆ ಹಾದಿ ತಪ್ಪುತ್ತಿದ್ದು, ಸಣ್ಣ ವ್ಯಾಪಾರಿಗಳು ಬೀದಿಗೆ ಬೀಳುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಆನ್‌ಲೈನ್ ಫಾರ್ಮಸಿ ಸೇವೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ರೀಟೈಲ್ ಫಾರ್ಮಸಿ ಅಸೋಸಿಯೇಷನ್ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬುಧವಾರದಂದು ಬೃಹತ್ ಹಕ್ಕೊತ್ತಾಯ ಪ್ರತಿಭಟನೆ ನಡೆಯಿತು. ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ನೂರಾರು ವ್ಯಾಪಾರಿಗಳು, ತಮ್ಮ ಕೈಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆನ್‌ಲೈನ್ ಫಾರ್ಮಸಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಪ್ರಕಾರ, ಆನ್‌ಲೈನ್‌ನಲ್ಲಿ ಯಾವುದೇ ಕಟ್ಟುನಿಟ್ಟಿನ ನಿಯಂತ್ರಣ ಹಾಗೂ ಪರಿಶೀಲನೆ ಇಲ್ಲದೆ ಮನಬಂದಂತೆ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಾಣಾಪಾಯ ತರಬಲ್ಲ ಆಂಟಿಬಯೋಟಿಕ್ ಹಾಗೂ ತೀವ್ರ ವ್ಯಸನಕಾರಿ ಔಷಧಿಗಳು ಸಾರ್ವಜನಿಕವಾಗಿ ದುರುಪಯೋಗವಾಗುತ್ತಿವೆ. ನಕಲಿ ವೈದ್ಯರ ಚೀಟಿಗಳನ್ನು (Prescriptions) ಬಳಸಿ ಔಷಧ ತರಿಸಿಕೊಳ್ಳುವ ಜಾಲ ಹೆಚ್ಚಾಗಿದ್ದು, ಇತ್ತೀಚಿನ ದಿನಗಳಲ್ಲಿ ಶಾಲಾ-ಕಾಲೇಜು ಯುವಕರು ಡ್ರಗ್ಸ್ ಮಾತ್ರೆಗಳ ಅಡಿಕ್ಷನ್‌ಗೆ ಒಳಗಾಗುತ್ತಿರುವುದು ಇಡೀ ಸಮಾಜಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ ಎಂದು ವ್ಯಾಪಾರಿಗಳು ಗಂಭೀರ ಆತಂಕ ಹೊರಹಾಕಿದರು. ಬೈಟ್
ಇದೇ ವೇಳೆ ಆನ್‌ಲೈನ್ ಸಂಸ್ಥೆಗಳು ಜೀವರಕ್ಷಕ ಔಷಧಿಗಳ ಮೇಲೂ ಅತಿಯಾದ ರಿಯಾಯಿತಿ (ಡಿಸ್ಕೌಂಟ್) ನೀಡುತ್ತಿದ್ದು, ನಂಬಿಕಸ್ಥ ಸೇವೆಯನ್ನೇ ನಂಬಿಕೊಂಡಿರುವ ಗ್ರಾಮೀಣ ಹಾಗೂ ನಗರ ಭಾಗದ ಸಣ್ಣಪುಟ್ಟ ಮೆಡಿಕಲ್ ಅಂಗಡಿಗಳು ವ್ಯಾಪಾರವಿಲ್ಲದೆ ಮುಚ್ಚುವ ಹಂತಕ್ಕೆ ತಲುಪಿವೆ ಎಂದು ದೂರಿದರು. ತಕ್ಷಣವೇ ಇ-ಫಾರ್ಮಸಿ ದಂಧೆಗೆ ಬ್ರೇಕ್ ಹಾಕಿ ಕಠಿಣ ನಿಯಮ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಎಸ್.ಎಸ್‌.ಗುಡಣ್ಣವರ, ಎನ್.ಜಿ.ಕುಲಕರ್ಣಿ, ಕೇಶವ ಕುಲಕರ್ಣಿ, ಪ್ರಕಾಶ್ ಚೌದರಿ, ವೀರೇಶ್ ಕಿತ್ತೂರು ಸೇರಿದಂತೆ ನೂರಾರು ಫಾರ್ಮಸಿ ಮಾಲೀಕರು ಭಾಗವಹಿಸಿದ್ದರು.

Tags:

error: Content is protected !!