• ಗೃಹಲಕ್ಷ್ಮೀ ಹಣ ಉಳಿಸಿ ಫ್ರಿಡ್ಜ್ ಖರೀದಿ
• ಬಾಗಲಕೋಟೆಯ ದೇವಲಾಪುರದಲ್ಲಿ ಮಾದರಿ ನಡೆ
• ಸುವರ್ಣ ಹಿರೇಮಠ ಕುಟುಂಬಕ್ಕೆ ಯೋಜನೆಯ ಆಸರೆ
• ಶಾಸಕ ಉಮೇಶ್ ಮೇಟಿ ಅವರಿಂದಲೇ ಉದ್ಘಾಟನೆ
ಸರ್ಕಾರದ ಗೃಹಲಕ್ಷ್ಮೀ ಯೋಜನೆ ಮಹಿಳೆಯರ ಕೈ ಹಿಡಿದಿರುವುದಕ್ಕೆ ಬಾಗಲಕೋಟೆಯಲ್ಲಿ ಮತ್ತೊಂದು ಸಾಕ್ಷಿ ಸಿಕ್ಕಿದೆ. ತಮಗೆ ಸಿಗುತ್ತಿದ್ದ ಮಾಸಿಕ ಎರಡು ಸಾವಿರ ರೂಪಾಯಿ ಹಣವನ್ನು ವ್ಯರ್ಥ ಮಾಡದೇ, ಪ್ರತಿ ತಿಂಗಳು ಜಾಣತನದಿಂದ ಉಳಿಸಿದ ಮಹಿಳೆಯೊಬ್ಬರು ತಮ್ಮ ಮನೆಗೆ ಹೊಸದೊಂದು ಫ್ರಿಡ್ಜ್ ಖರೀದಿಸುವ ಮೂಲಕ ಇಡೀ ಗ್ರಾಮಕ್ಕೆ ಮಾದರಿಯಾಗಿದ್ದಾರೆ.
ಬಾಗಲಕೋಟೆ ತಾಲೂಕಿನ ದೇವಲಾಪುರ ಗ್ರಾಮದ ಸುವರ್ಣ ಹಿರೇಮಠ ಎಂಬುವವರ ಕುಟುಂಬಕ್ಕೆ ಸರ್ಕಾರದ ಗೃಹಲಕ್ಷ್ಮಿ ಯೋಜನೆ ದೊಡ್ಡ ಆಸರೆಯಾಗಿದೆ. ಪ್ರತಿ ತಿಂಗಳು ಗೃಹಲಕ್ಷ್ಮೀ ಯೋಜನೆಯಡಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದ ಹಣವನ್ನು ಅತ್ಯಂತ ಜಾಗರೂಕತೆಯಿಂದ ಉಳಿಸಿಕೊಂಡು ಬಂದಿದ್ದ ಸುವರ್ಣ, ಈಗ ಅದೇ ಹಣದಿಂದ ತಮ್ಮ ಮನೆಗೆ ಬೇಕಾಗಿದ್ದ ಫ್ರಿಡ್ಜ್ (ರೆಫ್ರಿಜರೇಟರ್) ಖರೀದಿಸಿದ್ದಾರೆ. ತಾವು ಕಷ್ಟಪಟ್ಟು ಉಳಿಸಿದ ಹಣದಿಂದ ಬಂದ ಹೊಸ ಫ್ರಿಡ್ಜ್ಗೆ ರಿಬನ್ ಕಟ್ಟಿ, ಹೂವಿನಿಂದ ಅಲಂಕರಿಸಿ ಸಂಭ್ರಮಿಸಿರುವ ಸುವರ್ಣ, ಈ ಭಾಗ್ಯ ಕರುಣಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ದೇವಲಾಪುರ ಗ್ರಾಮಕ್ಕೆ ಭೇಟಿ ನೀಡಿದ್ದ ನೂತನ ಶಾಸಕ ಉಮೇಶ್ ಮೇಟಿ ಅವರು ಸುವರ್ಣ ಹಿರೇಮಠ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಶಾಸಕರ ಕೈಯಿಂದಲೇ ರಿಬ್ಬನ್ ಕತ್ತರಿಸಿ ಹೊಸ ಫ್ರಿಡ್ಜ್ ಅನ್ನು ಓಪನ್ ಮಾಡಿಸುವ ಮೂಲಕ ಸುವರ್ಣ ಹಿರೇಮಠ ಅವರು ತಮ್ಮ ಸಂತಸವನ್ನು ಇಮ್ಮಡಿಗೊಳಿಸಿಕೊಂಡರು. ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣವನ್ನು ಮಹಿಳೆಯರು ಹೇಗೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ದೇವಲಾಪುರದ ಈ ಘಟನೆ ಅತ್ಯುತ್ತಮ ಉದಾಹರಣೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

