• ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ ಕರೆ
• ಬಾಗಲಕೋಟೆ ಜಿಲ್ಲೆಯಲ್ಲೂ ಸಂಪೂರ್ಣ ಬೆಂಬಲ ವ್ಯಕ್ತ
• 1,400 ಮೆಡಿಕಲ್ ಶಾಪ್‌ಗಳು ಸಂಪೂರ್ಣ ಬಂದ್
• ಡಿಸಿ ಕಚೇರಿವರೆಗೆ ಬೃಹತ್ ಮೌನ ಮೆರವಣಿಗೆ

ಆನ್‌ಲೈನ್ ಫಾರ್ಮಸಿ ವಿರೋಧಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಒಕ್ಕೂಟ (AIOCD) ನೀಡಿರುವ ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ ಕರೆಗೆ ಬಾಗಲಕೋಟೆ ಜಿಲ್ಲೆಯಲ್ಲೂ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಾದ್ಯಂತ ನಿನ್ನೆ ಮಧ್ಯರಾತ್ರಿಯಿಂದಲೇ ಔಷಧ ಅಂಗಡಿಗಳು ಬಾಗಿಲು ಮುಚ್ಚಿದ್ದು, ತುರ್ತು ಔಷಧಗಳಿಗಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಗಲಕೋಟೆ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ಈ ಮುಷ್ಕರ ಯಶಸ್ವಿಯಾಗಿದ್ದು, ಜಿಲ್ಲೆಯಾದ್ಯಂತ ಇರುವ ಸುಮಾರು 1,400 ಮೆಡಿಕಲ್ ಶಾಪ್‌ಗಳು ಸಂಪೂರ್ಣವಾಗಿ ಬಂದ್ ಆಗಿವೆ. ನಿನ್ನೆ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿರುವ ಈ ಬಂದ್‌ನಿಂದಾಗಿ ಆಸ್ಪತ್ರೆಗಳ ಮುಂಭಾಗದ ಔಷಧ ಅಂಗಡಿಗಳೂ ಸಹ ಮುಚ್ಚಿವೆ. ನಿಯಮಬಾಹಿರವಾಗಿ ಇಂಟರ್ನೆಟ್ ಮೂಲಕ ಔಷಧ ಮಾರಾಟ ಮಾಡುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಔಷಧಿ ವ್ಯಾಪಾರಿಗಳು ಈ ನಿರ್ಧಾರಕ್ಕೆ ಬಂದಿದ್ದು, ಜಿಲ್ಲೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದಲ್ಲಿ ಮೆಡಿಕಲ್ ಶಾಪ್‌ಗಳು ಬಂದ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ತಲ್ಲಣ ಮೂಡಿಸಿದೆ.

ಪ್ರತಿಭಟನೆಯ ಭಾಗವಾಗಿ ಇಂದು ಬೆಳಗ್ಗೆ 11 ಗಂಟೆಗೆ ಬಾಗಲಕೋಟೆಯ ನವನಗರದ ನೌಕರರ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘಟನೆಯ ಪದಾಧಿಕಾರಿಗಳು ಹಾಗೂ ನೂರಾರು ವ್ಯಾಪಾರಿಗಳು ಬೃಹತ್ ಮೌನ ಮೆರವಣಿಗೆ ನಡೆಸಲಿದ್ದಾರೆ. ಇ-ಫಾರ್ಮಸಿಗಳಿಂದ ಸಾಂಪ್ರದಾಯಿಕ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯ ಮತ್ತು ಔಷಧಗಳ ದುರ್ಬಳಕೆ ತಡೆಯುವಂತೆ ಒತ್ತಾಯಿಸಿ, ಮೆರವಣಿಗೆಯ ಬಳಿಕ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಒಕ್ಕೂಟದ ಪ್ರಮುಖರು ಮನವಿ ಪತ್ರ ಸಲ್ಲಿಸಲಿದ್ದಾರೆ.
