• ಖಾನಾಪುರ ಪಟ್ಟಣ ಪಂಚಾಯಿತಿ ಅರವಟಿಗೆಯಲ್ಲಿ ಅವ್ಯವಸ್ಥೆ
• ಕುಡಿಯುವ ನೀರಿನ ಜಾಗದಲ್ಲಿ ಬೈಕ್ ಪಾರ್ಕಿಂಗ್
• ಬಿಸಿಲಿದ್ದರೂ ಸಾರ್ವಜನಿಕರಿಗೆ ಸಿಗುತ್ತಿಲ್ಲ ಕುಡಿಯುವ ನೀರು
• ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ

ಖಾನಾಪುರದ ತಹಶೀಲ್ದಾರ್ ಕಚೇರಿ ಆವರಣದ ಮುಂದೆ ಪಟ್ಟಣ ಪಂಚಾಯಿತಿ ವತಿಯಿಂದ ಸಾರ್ವಜನಿಕರಿಗಾಗಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಅರವಟಿಗೆಯ ಜಾಗದಲ್ಲಿ ನೀರಿನ ವ್ಯವಸ್ಥೆಯೇ ಇಲ್ಲದೆ, ಬೈಕ್ಗಳನ್ನು ಪಾರ್ಕಿಂಗ್ ಮಾಡುತ್ತಿರುವ ಬೇಜವಾಬ್ದಾರಿತನ ಬೆಳಕಿಗೆ ಬಂದಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೂ ಅಧಿಕಾರಿಗಳು ತೋರುತ್ತಿರುವ ಈ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಖಾನಾಪುರ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿರುವುದನ್ನು ಗಮನಿಸಿ, ಸಾರ್ವಜನಿಕರ ದಾಹ ನೀಗಿಸುವ ನಿಟ್ಟಿನಲ್ಲಿ ಖಾನಾಪುರ ಪಟ್ಟಣ ಪಂಚಾಯಿತಿ ವತಿಯಿಂದ ತಹಶೀಲ್ದಾರ್ ಕಚೇರಿ ಆವರಣದ ಮುಂದೆ ಶುದ್ಧ ಕುಡಿಯುವ ನೀರಿನ ಅರವಟಿಗೆಯ ಪೆಂಡಾಲ್ ಹಾಕಲಾಗಿತ್ತು. ಆದರೆ, ಆರಂಭವಾದ ಕೆಲವೇ ದಿನಗಳಲ್ಲಿ ಈ ಅರವಟಿಗೆ ಸಂಪೂರ್ಣ ಬರಿದಾಗಿದ್ದು, ಸಾರ್ವಜನಿಕರಿಗೆ ಕುಡಿಯಲು ನೀರಿನ ಒಂದೇ ಒಂದು ಮಡಕೆಯೂ ಇಲ್ಲದಂತಾಗಿದೆ. ಅತ್ಯಂತ ಬೇಸರದ ಸಂಗತಿಯೆಂದರೆ, ಸಾರ್ವಜನಿಕರು ನೀರು ಕುಡಿಯಬೇಕಾದ ಪೆಂಡಾಲ್ ಕೆಳಗಿನ ಜಾಗದಲ್ಲಿ ಸದ್ಯ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದ್ದು, ಸಾರ್ವಜನಿಕರ ಕಣ್ಣಿಗೆ ಇದು ಅಧಿಕಾರಿಗಳ ಕಾಟಾಚಾರದ ವ್ಯವಸ್ಥೆಯಂತೆ ಕಾಣಿಸುತ್ತಿದೆ. ವಿವಿಧ ಕೆಲಸ ಕಾರ್ಯಗಳಿಗಾಗಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಪ್ರತಿದಿನ ನೂರಾರು ಸಾರ್ವಜನಿಕರು ಖಾನಾಪುರ ಪಟ್ಟಣಕ್ಕೆ ಹಾಗೂ ತಹಶೀಲ್ದಾರ್ ಕಚೇರಿಗೆ ಬರುತ್ತಾರೆ. ಬಿಸಿಲಿನ ಬೇಗೆಗೆ ಬೆಂದು ಬರುವ ಜನರಿಗೆ ನೀರಿನ ಸೌಕರ್ಯ ಕಲ್ಪಿಸಿ ಸ್ಪಂದಿಸಬೇಕಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳೂ ಆದ ತಹಶೀಲ್ದಾರರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಣ್ಣೆದುರೇ ಕುಡಿಯುವ ನೀರಿನ ಜಾಗದಲ್ಲಿ ಬೈಕ್ ಪಾರ್ಕಿಂಗ್ ಆಗುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು, ಬೈಕ್ ಪಾರ್ಕಿಂಗ್ ತೆರವುಗೊಳಿಸಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ.

