ಬಡವರ ಪಾಲಿನ ದೇವಸ್ಥಾನವಾಗಬೇಕಿದ್ದ ಸರ್ಕಾರಿ ಆಸ್ಪತ್ರೆ, ಈಗ ರೇಷನ್ ಕಾರ್ಡ್ ಕೇಳುವ ಕಚೇರಿಯಂತಾಗಿದೆಯೇ? ಹಲಸಿಯಲ್ಲಿ ಚಿಕಿತ್ಸೆ ನೀಡಲು ಮೀನಾಮೇಷ ಎಣಿಸಿದ ವೈದ್ಯಾಧಿಕಾರಿಗೆ ಮಹಿಳಾ ನಾಯಕಿಯೊಬ್ಬರು ಬೆವರಿಳಿಸಿದ್ದಾರೆ.

ಖಾನಾಪುರ ತಾಲೂಕಿನ ಹಲಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಮೇಶ್ ಪಾಟೀಲ್ ಅವರ ಬೇಜವಾಬ್ದಾರಿತನದಿಂದ ಇಬ್ಬರು ಮಹಿಳಾ ರೋಗಿಗಳು ಸಂಕಷ್ಟಕ್ಕೀಡಾದ ಘಟನೆ ನಡೆದಿದೆ. ಹತ್ತರವಾಡ ಗ್ರಾಮದ ಮಹಿಳೆಯರು ತೀವ್ರ ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಸಂದರ್ಭದಲ್ಲಿ, ವೈದ್ಯರು ಅವರಿಗೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಒಬ್ಬ ಮಹಿಳೆಗೆ ಸಕ್ಕರೆ ಕಾಯಿಲೆ ಹೆಚ್ಚಾಗಿದ್ದು, ಇನ್ನೊಬ್ಬರಿಗೆ ಭೇದಿಯಾಗುತ್ತಿದ್ದರೂ ಚಿಕಿತ್ಸೆ ನೀಡುವ ಬದಲು ಸಲ್ಲದ ಪ್ರಶ್ನೆಗಳನ್ನು ಕೇಳಿ ಸತಾಯಿಸಲಾಗಿದೆ. ಕೊನೆಗೆ ‘ಸಲೈನ್’ ಹಚ್ಚಲು ರೇಷನ್ ಕಾರ್ಡ್ ಇಲ್ಲ ಎಂಬ ನೆಪವೊಡ್ಡಿ ಸುಸ್ತಾಗಿದ್ದ ಮಹಿಳೆಯನ್ನು ಆಸ್ಪತ್ರೆಯಿಂದ ವಾಪಸ್ ಕಳುಹಿಸುವ ಮೂಲಕ ವೈದ್ಯರು ಮಾನವೀಯತೆ ಮರೆತಿದ್ದಾರೆ.

ಆಸ್ಪತ್ರೆಯಿಂದ ಸುಸ್ತಾಗಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು ಕಂಡ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸಾವಿತ್ರಿ ಮಾದಾರ, ಕೂಡಲೇ ಅವರನ್ನು ತನ್ನ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ವಿರುದ್ಧ ಗುಡುಗಿದ್ದಾರೆ. “ತುರ್ತು ಪರಿಸ್ಥಿತಿಯಲ್ಲಿ ರೋಗಿ ಪ್ರಾಣ ಬಿಟ್ಟರೆ ಹೊಣೆ ಯಾರು?” ಎಂದು ಕಿಡಿಕಾರಿದ ಸಾವಿತ್ರಿ ಅವರ ಖಡಕ್ ವರ್ತನೆಗೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದಾರೆ. ಇಂತಹ ಬೇಜವಾಬ್ದಾರಿ ವೈದ್ಯರ ವಿರುದ್ಧ ತಾಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾವಿತ್ರಿ ಮಾದಾರ ಆಗ್ರಹಿಸಿದ್ದು, ಸದ್ಯ ಈ ಘಟನೆ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
