ಬೆಳಗಾವಿಯ ತೇಲಕವಾಡಿ ಕಾಂಗ್ರೆಸ್ ರಸ್ತೆಯ ಮೊದಲ ರೈಲ್ವೆ ಗೇಟ್ ಹಾಗೂ ಅರುಣ್ ಥಿಯೇಟರ್ ಬಳಿ ಇಬ್ಬರು ನಿರ್ಗತಿಕ ವ್ಯಕ್ತಿಗಳು ತೀವ್ರ ಬಿಸಿಲಿನಲ್ಲೂ ಗಂಟೆಗಟ್ಟಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆವರೆಗೂ ಒಂದೇ ಜಾಗದಲ್ಲಿ ಯಾವುದೇ ಚಲನೆ ಇಲ್ಲದೆ ಬಿದ್ದಿರುವ ಇವರು, ಮಿತಿಮೀರಿದ ಕುಡಿತದಿಂದ ಹೀಗಾಗಿದ್ದಾರೋ ಅಥವಾ ತೀವ್ರ ಬಿಸಿಲಾಘಾತ ಮತ್ತು ಅನಾರೋಗ್ಯದಿಂದ ಮೂರ್ಛೆ ಹೋಗಿದ್ದಾರೋ ತಿಳಿಯದಾಗಿದೆ. ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ತಕ್ಷಣ ದಂಡ ವಿಧಿಸುವ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ಬಿದ್ದು ನ್ಯೂಸೆನ್ಸ್ ಸೃಷ್ಟಿಸುವವರ ಅಥವಾ ಅಸಹಾಯಕರ ಪರವಾಗಿ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಜಾಗೃತ ನಾಗರಿಕರಾದ ಸಂತೋಷ್ ದರೇಕರ್ ಅವರು ಜಿಲ್ಲಾಧಿಕಾರಿಗಳು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ತುರ್ತು ಮನವಿ ಸಲ್ಲಿಸಿ, ತಕ್ಷಣ ಇವರ ರಕ್ಷಣೆಗೆ ಧಾವಿಸುವಂತೆ ಕೋರಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಕುಡಿದು ಮಲಗುವವರಿಗೆ ದಂಡ, ಜೈಲು ಶಿಕ್ಷೆ ಅಥವಾ ಕಡ್ಡಾಯವಾಗಿ 30 ದಿನಗಳ ಪುನರ್ವಸತಿ ಕೇಂದ್ರಕ್ಕೆ ಸೇರಿಸುವಂತಹ ಕಠಿಣ ಕಾನೂನು ಜಾರಿಗೆ ಬರಬೇಕಿದೆ. ಇಲ್ಲದಿದ್ದರೆ ಬೆಳಗಾವಿಯ ಪ್ರತಿಯೊಂದು ಮುಖ್ಯ ರಸ್ತೆಗಳೂ ಕುಡುಕರ ತಾಣವಾಗಿ ಮಾರ್ಪಡಲಿವೆ. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು, ಫುಟ್ಪಾತ್ ಮೇಲಿರುವ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.

