ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ಘೋರ ನಿರ್ಲಕ್ಷ್ಯಕ್ಕೆ ಜೀವಂತ ಸಾಕ್ಷಿಯೊಂದು ಸಿಕ್ಕಿದೆ. ಮುದ್ದಾಂ 18 ವರ್ಷಗಳ ಹಿಂದೆ ನೆರೆಹಾವಳಿಗೆ ತುತ್ತಾಗಿ ಸರ್ವಸ್ವವನ್ನೂ ಕಳೆದುಕೊಂಡಿದ್ದ ಹುನಗುಂದ ತಾಲೂಕಿನ ಇಬ್ಬರಗಿ (ಇದ್ದಲಿಗಿ) ಗ್ರಾಮದ ಯೋಜನೆ ಬಾಧಿತ ಸಂತ್ರಸ್ತರ ಹೋರಾಟ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಇಂದಿಗೂ ತಗಡಿನ ತಾತ್ಕಾಲಿಕ ಶೆಡ್ಗಳಲ್ಲೇ ನರಕಯಾತನೆ ಅನುಭವಿಸುತ್ತಿರುವ ಜನರು, ಶಾಶ್ವತ ಪುನರ್ವಸತಿಗೆ ಆಗ್ರಹಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.


ಕಳೆದ 2007ರಲ್ಲಿ ಸಂಭವಿಸಿದ ಭೀಕರ ನೆರೆಹಾವಳಿಗೆ ತುತ್ತಾಗಿದ್ದ ಇಬ್ಬರಗಿ ಗ್ರಾಮದ ಜನರಿಗೆ ಇಂದಿಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅಂದು ಗಂಜಿ ಕೇಂದ್ರದಿಂದ ಹೊರಬಂದ ಸಂತ್ರಸ್ತರಿಗೆ ಅಂದಿನ ಬಿಜೆಪಿ ಸರ್ಕಾರ ಪುನರ್ವಸತಿ ಕಲ್ಪಿಸುವ ನೆಪದಲ್ಲಿ ತಾತ್ಕಾಲಿಕ ತಗಡಿನ ಶೆಡ್ಗಳನ್ನು ನಿರ್ಮಿಸಿಕೊಟ್ಟಿತ್ತು. ಅಂದಿನಿಂದ ಇಂದಿನವರೆಗೆ, ಅಂದರೆ ಬರೋಬ್ಬರಿ 18 ವರ್ಷಗಳಿಂದ 200ಕ್ಕೂ ಹೆಚ್ಚು ಕುಟುಂಬಗಳು ಚಳಿ, ಬಿಸಿಲು, ಮಳೆ ಎನ್ನದೇ ಅದೇ ಪಾಳುಬಿದ್ದ ಶೆಡ್ಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಸದ್ಯ ಸೋರುತ್ತಿರುವ ಈ ತಗಡಿನ ಶೆಡ್ಗಳ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಪ್ರತಿನಿತ್ಯ ಹಾವು, ಚೇಳುಗಳಂತಹ ವಿಷಜಂತುಗಳ ಭಯದಲ್ಲೇ ಜನರು ಜೀವ ಕೈಯಲ್ಲಿಡಿದು ಬದುಕುವಂತಾಗಿದೆ.


ಇಷ್ಟೆಲ್ಲಾ ಕಷ್ಟಗಳಿದ್ದರೂ ಈ ಪುನರ್ವಸತಿ ಕೇಂದ್ರಕ್ಕೆ ಇಂದಿಗೂ ಕತ್ತಲ ಭಾಗ್ಯವೇ ಗತಿಯಾಗಿದೆ. ಸಮರ್ಪಕ ರಸ್ತೆ, ವಿದ್ಯುತ್ ಹಾಗೂ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದೆ ಗ್ರಾಮಸ್ಥರು ನೀರಿಗಾಗಿ ಮೈಲಿಗಟ್ಟಲೆ ಅಲೆಯುವಂತಾಗಿದೆ. ಮೂಲಭೂತ ಸೌಕರ್ಯ ಹಾಗೂ ಶಾಶ್ವತ ಮನೆ ನಿರ್ಮಾಣಕ್ಕಾಗಿ ಜಾಗ ನೀಡುವಂತೆ ಆಗ್ರಹಿಸಿ ಕಳೆದ 9 ದಿನಗಳಿಂದ ಸಂತ್ರಸ್ತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ, ಇತ್ತ ತಿರುಗಿಯೂ ನೋಡದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಪೂರ್ಣವಾಗಿ ಕಣ್ಣು ಮುಚ್ಚಿ ಕುಳಿತಿದ್ದು, ತಮಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಸಂತ್ರಸ್ತರು ಎಚ್ಚರಿಸಿದ್ದಾರೆ.
