ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ವರುಣನ ಅಟ್ಟಹಾಸ ಶುರುವಾಗಿದೆ. ಆರಂಭದಲ್ಲೇ ಆಲಿಕಲ್ಲು ಮಳೆ ಮತ್ತು ರಕ್ಕಸ ಗಾಳಿಯ ಆರ್ಭಟಕ್ಕೆ ತಾಲೂಕಿನಾದ್ಯಂತ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.


ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ, ರೊಳ್ಳಿ, ಬಾಡಗಂಡಿ ಹಾಗೂ ಸಿದ್ದಾಪುರ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ಸುರಿದ ಭಾರಿ ಆಲಿಕಲ್ಲು ಮಳೆಗೆ ಇಡೀ ಜನಜೀವನ ಕಂಗೆಟ್ಟಿದೆ. ಚಂಡಮಾರುತದಂತ ಬೀಸಿದ ರಬಸದ ಗಾಳಿಗೆ ತಾಲೂಕಿನಲ್ಲಿ ಒಟ್ಟು 16 ದನದ ಶೆಡ್‌ಗಳು, 38 ಪತ್ರಾಸ್ ಶೆಡ್‌ಗಳು ಹಾಗೂ 3 ಮನೆಗಳು ನೆಲಸಮವಾಗಿವೆ. ರೊಳ್ಳಿ ಗ್ರಾಮದಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ ಆಕಳ ಕರು ಸಾವನ್ನಪ್ಪಿದ್ದರೆ, ಪತ್ರಾಸ್ ಮೇಲಿಂದ ಕಲ್ಲು ಬಿದ್ದು ಓರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದಾರೆ. ರಕ್ಕಸ ಗಾಳಿಯ ತೇಗಕ್ಕೆ ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಇಡೀ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಪ್ರಸ್ತುತ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರಿಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ಇನ್ನು ಈ ಮಳೆ ಅವಾಂತರಕ್ಕೆ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಅರವಿಂದಪ್ಪ ಜರಾಳಿ ಎಂಬ ರೈತನಿಗೆ ಸೇರಿದ ಬರೋಬ್ಬರಿ 14 ಎಕರೆ ಕಬ್ಬು ಸಂಪೂರ್ಣ ನಾಶವಾಗಿದ್ದು, ಇವರೊಂದಿಗೆ ನೂರಾರು ರೈತರ ಬೆಳೆಗಳು ಮಣ್ಣು ಪಾಲಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಬೀಳಗಿ ತಹಶೀಲ್ದಾರ್ ವಿನೋದ ಹತ್ತಳ್ಳಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದೆ. ಈ ಬೆನ್ನಲ್ಲೇ ರೈತ ಸಂಘದ ತಾಲೂಕಾ ಅಧ್ಯಕ್ಷ ಶಿವನಗೌಡ ಪಾಟೀಲ್ ಅವರು, ಸಂಕಷ್ಟದಲ್ಲಿರುವ ಅನ್ನದಾತನಿಗೆ ಸರ್ಕಾರ ತಕ್ಷಣವೇ ಸ್ಪಂದಿಸಿ ಸೂಕ್ತ ಜಂಟಿ ಪರಿಹಾರ ಧನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
