hubbali

ಹುಬ್ಬಳ್ಳಿ ಸಾಯಿಬಾಬಾ ಮಂದಿರದಲ್ಲಿ ಅವ್ಯವಹಾರ ಪ್ರಕರಣದ ಆರೋಪ ಮತ್ತೊಮ್ಮೆ ಸದ್ದು; ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಪ್ರತಿಭಟನೆ

Share

ಹುಬ್ಬಳ್ಳಿಯ ಹಳೇ ಕೋರ್ಟ್ ಪಕ್ಕದಲ್ಲಿರುವ, ಸುಪ್ರಸಿದ್ಧ ಸಾಯಿ ಮಂದಿರದಲ್ಲಿ ಅವ್ಯವಹಾರ ಆರೋಪದ ಪ್ರಕರಣ ಮತ್ತೊಮ್ಮೆ ಭಾರೀ ಸದ್ದು ಮಾಡಿದೆ. ಕಳೆದ ಹಲವು ವರ್ಷಗಳಿಂದ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಕೇಳಿ ಬರುತ್ತಿರುವ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ, ಕೆಲ ದಿನಗಳ ಹಿಂದಷ್ಟೇ ಜಿಲ್ಲಾಡಳಿತ ತನಿಖಾ ಸಮಿತಿಯನ್ನು ರಚಿಸಿತ್ತು.

ಆದರೆ ಪ್ರಕರಣ ತನಿಖಾ ಹಂತದಲ್ಲಿದ್ದರೂ ದೇವಸ್ಥಾನದಲ್ಲಿ ಇನ್ನೂ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದೂಪರ ಸಂಘಟನೆಗಳು ಇಂದು ತೀವ್ರ ಪ್ರತಿಭಟನೆ ನಡೆಸಿ ಮಾತಿನ ಚಕಮಕಿಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಪ್ರತಿಭಟನೆ ನಡೆಯಿತು.

ಹೌದು,,, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ, ಕಾರ್ಯಕರ್ತರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು. ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿದ್ದು, ದೇವಸ್ಥಾನದ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಆಕ್ರೋಶಗೊಂಡ ಕಾರ್ಯಕರ್ತರು ದೇವಸ್ಥಾನದೊಳಗಿರುವ ಹುಂಡಿಗಳಿಗೆ ಸರಪಳಿ ಮೂಲಕ ಬೀಗ ಹಾಕಿ ಸೀಜ್ ಮಾಡಿದರು. ತನಿಖೆ ಪೂರ್ಣಗೊಳ್ಳುವವರೆಗೆ ದೇವಸ್ಥಾನದಲ್ಲಿ ಯಾವುದೇ ರೀತಿಯ ದೇಣಿಗೆ ಸಂಗ್ರಹ ನಡೆಸಬಾರದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ದೇವಸ್ಥಾನದ ಆವರಣದಲ್ಲಿದ್ದ ಬಾರ್ ಕೋಡ್, ದೇಣಿಗೆ ಸಂಗ್ರಹ ಸ್ಕ್ಯಾನರ್, ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳದಲ್ಲಿ ಉದ್ಭವಿಸಿದ ಗಲಾಟೆಯನ್ನು ಹತೋಟಿಗೆ ತರಲು ಉಪನಗರ ಠಾಣೆ ಪೊಲೀಸರು ಹರಸಾಹಸಪಟ್ಟರು. ಸದ್ಯ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜಿಲ್ಲಾಡಳಿತ ರಚಿಸಿರುವ ತನಿಖಾ ಸಮಿತಿ ವರದಿ ನೀಡುವವರೆಗೆ ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ಇರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!