BELAGAVI

ಬೆಳಗಾವಿ ಮಹಾಪಾಲಿಕೆಗೆ ಕರವೇ ಮುತ್ತಿಗೆ: ಮಹಾಜನ್ ವರದಿ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಅಬ್ಬರ!

Share

ಬೆಳಗಾವಿಯಲ್ಲಿಂದು ಗಡಿ ವಿವಾದದ ಕಿಚ್ಚು ಮತ್ತೆ ಜೋರಾಗಿದೆ. ಪಾಲಿಕೆಯ ಸಾಮಾನ್ಯ ಸಭೆಯ ಹಿನ್ನೆಲೆಯಲ್ಲಿ ಕರವೇ ಶಿವರಾಮೆಗೌಡ ಬಣದ ಕಾರ್ಯಕರ್ತರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದ್ದು, ಮಹಾಜನ್ ವರದಿ ಜಾರಿಗಾಗಿ ಆಗ್ರಹಿಸುತ್ತಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯ ಆರಂಭಕ್ಕೂ ಮುನ್ನವೇ ಇಂದು ಗಡಿ ಜಿಲ್ಲೆಯಲ್ಲಿ ಹೈಡ್ರಾಮಾ ನಡೆದಿದೆ. ಕರವೇ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೊಡಿ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪಾಲಿಕೆ ಆವರಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ಪರಿಹಾರವೆನ್ನಲಾದ ‘ಮಹಾಜನ್ ವರದಿ’ಯನ್ನು ಜಾರಿಗೊಳಿಸಲು ಪಾಲಿಕೆ ಸಭೆಯಲ್ಲಿ ತಕ್ಷಣ ಗೊತ್ತುವಳಿ ಸ್ವೀಕರಿಸಬೇಕೆಂದು ಕನ್ನಡ ಹೋರಾಟಗಾರರು ಪಟ್ಟು ಹಿಡಿದಿದ್ದಾರೆ. ಆಡಳಿತ ಪಕ್ಷದಲ್ಲಿರುವ ಬಿಜೆಪಿ ಹಾಗೂ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರ ಮೇಲೆ ಒತ್ತಡ ಹೇರಲು ಈ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನಾಕಾರರ ಆಕ್ರೋಶದ ನಡುವೆ ಮಾತನಾಡಿದ ವಾಜೀದ್ ಹಿರೇಕೊಡಿ, “ಇಂದಿನ ಸಭೆಯಲ್ಲಿ ಮಹಾಜನ್ ವರದಿ ಜಾರಿಗೆ ಸಂಬಂಧಿಸಿದಂತೆ ಗೊತ್ತುವಳಿ ಪಾಸ್ ಮಾಡದಿದ್ದರೆ, ಸಭೆಯಲ್ಲಿರುವ ಯಾವೊಬ್ಬ ಸದಸ್ಯರನ್ನು ಹೊರಗೆ ಬರಲು ಬಿಡುವುದಿಲ್ಲ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಹೋರಾಟಗಾರರ ಅಬ್ಬರದಿಂದಾಗಿ ಪಾಲಿಕೆ ಆವರಣದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಇಡೀ ಪಾಲಿಕೆ ಸುತ್ತಲೂ ಸರ್ಪಗಾವಲು ಹಾಕಿದ್ದಾರೆ. ಬೆಳಗಾವಿ ಪಾಲಿಕೆಯ ಇತಿಹಾಸದಲ್ಲಿ ಈ ಸಭೆ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಸದಸ್ಯರು ಕನ್ನಡದ ಪರ ನಿಲುವು ತಾಳುತ್ತಾರೆಯೇ ಎಂಬುದು ಸದ್ಯದ ಕುತೂಹಲವಾಗಿದೆ.

Tags:

error: Content is protected !!