ಧಾರವಾಡದಲ್ಲಿ ಕಳೆದ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ನಗರದಾದ್ಯಂತ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕಚ್ಚಿದ್ದು, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆದರೆ, ಘಟನೆ ನಡೆದು ಹಲವು ಗಂಟೆಗಳಾದರೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಧಾರವಾಡದ ಮೆಹಬೂಬ್ ನಗರ ಹಾಗೂ ಆನಂದ ನಗರದ ಮುಖ್ಯ ರಸ್ತೆಯಲ್ಲಿ ಬಿರುಗಾಳಿ ಮಳೆಗೆ ವಿದ್ಯುತ್ ಕಂಬಗಳು ಮತ್ತು ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮಂಗಳವಾರ ಸಂಜೆಯೇ ಈ ಘಟನೆ ನಡೆದಿದ್ದರೂ, ಬುಧವಾರ ಮಧ್ಯಾಹ್ನವಾದರೂ ತೆರವು ಕಾರ್ಯಾಚರಣೆ ಆರಂಭವಾಗದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಅರಣ್ಯ ಇಲಾಖೆ, ಹೆಸ್ಕಾಂ ಅಥವಾ ಪಾಲಿಕೆಯ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ. ಮುಖ್ಯವಾಗಿ ವಿದ್ಯುತ್ ತಂತಿಗಳು ರಸ್ತೆಯ ಮೇಲೆ ಬಿದ್ದಿದ್ದು, ಒಂದು ವೇಳೆ ವಿದ್ಯುತ್ ಪ್ರವಹಿಸಿದ್ದರೆ ಸಂಭವಿಸಬಹುದಾದ ಅನಾಹುತಕ್ಕೆ ಹೊಣೆ ಯಾರು? ಎಂಬ ಪ್ರಶ್ನೆ ಎದುರಾಗಿದೆ. ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು ಕೂಡಲೇ ರಸ್ತೆ ತೆರವುಗೊಳಿಸಿ, ವಿದ್ಯುತ್ ಸಂಪರ್ಕ ಸರಿಪಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
