ಕುಂದಾನಗರಿ ಬೆಳಗಾವಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಅಬ್ಬರವೇನೋ ಜೋರಾಗಿದೆ, ಆದರೆ ವಾಸ್ತವದಲ್ಲಿ ಜನಸಾಮಾನ್ಯರ ಬದುಕು ಮಾತ್ರ ನರಕಸದೃಶವಾಗಿದೆ. ಅಗೆದ ರಸ್ತೆಗಳನ್ನು ಮುಚ್ಚದ ಅಧಿಕಾರಿಗಳ ನಿರ್ಲಕ್ಷ್ಯದ ನಡುವೆ, ಇಂದು ಟ್ರಾಫಿಕ್ ಪೊಲೀಸರೇ ರಸ್ತೆಗಿಳಿದು ಮಣ್ಣು ಹಾಕುವ ಪರಿಸ್ಥಿತಿ ಬಂದೊದಗಿದೆ.

ಬೆಳಗಾವಿ ನಗರದ ಮೂಲೆ ಮೂಲೆಗಳಲ್ಲಿ ಅಭಿವೃದ್ಧಿ ಎಂಬ ಹೆಸರಿನಲ್ಲಿ ರಸ್ತೆಗಳನ್ನು ಅಗೆಯಲಾಗಿದೆಯಾದರೂ, ಅವುಗಳ ಪೂರ್ಣಗೊಳಿಸುವಿಕೆ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲವು ಕಡೆಗಳಲ್ಲಿ ಕೆಲಸಗಳು ಅಲ್ಪಸ್ವಲ್ಪ ವೇಗ ಪಡೆದುಕೊಂಡಿದ್ದರೆ, ಇನ್ನು ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತು ಸಾರ್ವಜನಿಕರ ಸಂಚಾರಕ್ಕೆ ಕಂಟಕವಾಗಿ ಪರಿಣಮಿಸಿವೆ. ಮುಖ್ಯವಾಗಿ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವುದರಿಂದ ವಾಹನ ಸವಾರರು ಧೂಳಿನ ಮಜ್ಜನದೊಂದಿಗೆ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಣಾಗುತ್ತಿದ್ದಾರೆ. ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ನಡೆಯಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಆಡಳಿತಾತ್ಮಕ ವೈಫಲ್ಯಕ್ಕೆ ಹಿಡಿದ ಕನ್ನಡಿಯೆಂಬಂತೆ, ಮಂಗಳವಾರ ಶನಿಮಂದಿರದ ಬಳಿ ವಿಭಿನ್ನ ದೃಶ್ಯವೊಂದು ಕಂಡುಬಂದಿತು. ರಸ್ತೆಯ ಹೊಂಡಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಗಮನಿಸಿದ ಸಂಚಾರಿ ಪೊಲೀಸರು, ಅಧಿಕಾರಿಗಳಿಗಾಗಿ ಕಾಯದೆ ತಾವೇ ಸ್ವತಃ ಗುದ್ದಲಿ-ಪಿಕಾಸಿ ಹಿಡಿದು ರಸ್ತೆಯನ್ನು ಸಮತಟ್ಟುಗೊಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆಯಾದರೂ, ಸಂಬಂಧಪಟ್ಟ ಇಲಾಖೆಗಳ ಬೇಜವಾಬ್ದಾರಿತನದ ವಿರುದ್ಧ ಜನರ ಆಕ್ರೋಶ ಕಟ್ಟೆಯೊಡೆದಿದೆ.
