ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಭೂರುಣಕಿ ಗ್ರಾಮದಲ್ಲಿ ವರುಣನ ಅಬ್ಬರಕ್ಕೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮೇಲ್ಚಾವಣಿ ಹಾರಿಹೋಗಿದ್ದು, ಶಾಲೆಯ ಒಳಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಮಳೆನೀರಿಗೆ ಆಹುತಿಯಾಗಿವೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ-ಮಳೆಯ ರೌದ್ರಾವತಾರಕ್ಕೆ ಭೂರುಣಕಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯು ತತ್ತರಿಸಿ ಹೋಗಿದೆ. ಶಾಲೆಯ ಮೇಲ್ಚಾವಣಿಯ ಶೀಟುಗಳು ಗಾಳಿಯ ವೇಗಕ್ಕೆ ಸಂಪೂರ್ಣವಾಗಿ ಹಾರಿಹೋಗಿದ್ದು, ಮಳೆ ನೀರು ನೇರವಾಗಿ ಕೊಠಡಿಗಳ ಒಳಗೆ ನುಗ್ಗಿದೆ. ಪ್ರಸ್ತುತ ಬೇಸಿಗೆ ರಜೆ ಇರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಶಾಲೆಯಲ್ಲಿದ್ದ ಪೀಠೋಪಕರಣಗಳು, ಶೈಕ್ಷಣಿಕ ದಾಖಲೆಗಳು ಹಾಗೂ ಕಂಪ್ಯೂಟರ್ ಸೇರಿದಂತೆ ಹಲವು ಅಮೂಲ್ಯ ವಸ್ತುಗಳು ಮಳೆಯಲ್ಲಿ ನೆನೆದು ಸಂಪೂರ್ಣ ನಾಶವಾಗಿವೆ. ಶಾಲೆ ಪುನರಾರಂಭಗೊಳ್ಳುವ ಮೊದಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಪರಾಮರ್ಶೆ ನಡೆಸಿ ಶಾಲಾ ಕಟ್ಟಡಕ್ಕೆ ಹೊಸ ಮೇಲ್ಚಾವಣಿ ಅಳವಡಿಸಲು ಶಿಕ್ಷಣ ಪ್ರೇಮಿಗಳು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

