Bagalkot

ಲೋಕಾಪುರ: ಕೇಶವ ಸಿಮೆಂಟ್ ಕಾರ್ಖಾನೆಗೆ ಬೀಗ; ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಾರ್ಮಿಕರ ಆಕ್ರೋಶ

Share

ಕಡಿಮೆ ಸಂಬಳ, ಶೂ-ಹೆಲ್ಮೆಟ್ ಇಲ್ಲದ ದುಡಿಮೆ, ಕೇಳಿದ್ರೆ ಕೆಲಸದಿಂದ ತೆಗೆಯುವ ಬೆದರಿಕೆ ಹಿನ್ನೆಲೆ ಲೋಕಾಪುರದ ಕೇಶವ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರು ಇಂದು ಆಡಳಿತ ಮಂಡಳಿಯ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಸಮೀಪವಿರುವ ಕೇಶವ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರು ಇಂದು ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಕಳೆದ 19 ವರ್ಷಗಳಿಂದ ಒಂದೇ ರೀತಿಯ ವೇತನ ಪಡೆಯುತ್ತಾ ಜೀವನ ಸಾಗಿಸಲು ಪರದಾಡುತ್ತಿರುವ ಕಾರ್ಮಿಕರು, ಕಾರ್ಖಾನೆಯ ಮುಖ್ಯ ದ್ವಾರಕ್ಕೆ ಬೀಗ ಜಡಿದು ಧರಣಿ ಕುಳಿತಿದ್ದಾರೆ. ಪ್ರಸ್ತುತ ಸಿಗುತ್ತಿರುವ 10 ರಿಂದ 15 ಸಾವಿರ ರೂಪಾಯಿ ಸಂಬಳದಲ್ಲಿ ಸಂಸಾರ ನಡೆಸುವುದು ದುಸ್ತರವಾಗಿದ್ದು, ಕೂಡಲೇ ಮಾಸಿಕ ವೇತನವನ್ನು 22 ಸಾವಿರ ರೂಪಾಯಿಗೆ ಏರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ವಾಗ್ವಾದ ಹಾಗೂ ಆಡಳಿತ ಮಂಡಳಿಯ ವಿರುದ್ಧ ದಿಕ್ಕಾರದ ಘೋಷಣೆಗಳು ಮೊಳಗುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಕಾರ್ಖಾನೆಯಲ್ಲಿ ಕನಿಷ್ಠ ಸುರಕ್ಷತಾ ಕ್ರಮಗಳೂ ಇಲ್ಲದಿರುವುದು ಕಾರ್ಮಿಕರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. “ನಾಲ್ಕು ವರ್ಷಕ್ಕೊಮ್ಮೆ ಇನ್ಕ್ರಿಮೆಂಟ್ ನೀಡಲಾಗುತ್ತಿದೆ, ಆರು ವರ್ಷಕ್ಕೊಮ್ಮೆ ಶೂ ಕೊಡುತ್ತಾರೆ, ಇನ್ನು ತಲೆಗೆ ಧರಿಸುವ ಹೆಲ್ಮೆಟ್‌ಗಳಂತೂ ಇಲ್ಲವೇ ಇಲ್ಲ” ಎಂದು ಕಾರ್ಮಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಗುತ್ತಿಗೆ ಆಧಾರಿತ ಕಾರ್ಮಿಕರಿಗೆ ದಿನಕ್ಕೆ 750 ರೂ. ಕೂಲಿ ನೀಡಲಾಗುತ್ತಿದ್ದು, ಸ್ಥಳೀಯ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾರ್ಮಿಕರ ಸುರಕ್ಷತೆಯ ಬಗ್ಗೆ ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.

ಇನ್ನು ಆಡಳಿತ ಮಂಡಳಿಯ ವಿರುದ್ಧ ಧ್ವನಿ ಎತ್ತಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕಲಾಗುತ್ತಿದೆ ಎಂಬ ಭಯದ ನಡುವೆಯೇ ಕಾರ್ಮಿಕರು ಒಗ್ಗಟ್ಟಾಗಿ ಹೋರಾಟಕ್ಕೆ ಇಳಿದಿದ್ದಾರೆ. “ನಮಗೆ ನ್ಯಾಯ ಬೇಕು, ಮಾಲೀಕರು ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಬಗೆಹರಿಸುವವರೆಗೆ ಪ್ರತಿಭಟನೆ ಕೈಬಿಡುವುದಿಲ್ಲ” ಎಂದು ಕಾರ್ಮಿಕರು ಎಚ್ಚರಿಸಿದ್ದಾರೆ.
ಕಾರ್ಖಾನೆ ಮಾಲೀಕರು ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Tags:

error: Content is protected !!