Bagalkot

ಬಾಗಲಕೋಟೆಯಲ್ಲಿ ಬಿಸಿಲ ಧಗಧಗ: 114 ಗ್ರಾಮಗಳಲ್ಲಿ ಜಲಕ್ಷಾಮದ ಭೀತಿ!

Share

ಬಾಗಲಕೋಟೆ ಜಿಲ್ಲೆಯಲ್ಲಿ ಸೂರ್ಯನ ಅಬ್ಬರಕ್ಕೆ ಕೆರೆ-ಕುಂಟೆಗಳು ಬತ್ತುತ್ತಿದ್ದು, ಭೀಕರ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಜಿಲ್ಲೆಯ ಸುಮಾರು 114 ಗ್ರಾಮಗಳಲ್ಲಿ ಮೇ ತಿಂಗಳ ಅಂತ್ಯಕ್ಕೆ ನೀರಿನ ತತ್ವಾರ ಉಂಟಾಗಲಿದ್ದು, ಜಿಲ್ಲಾಡಳಿತ ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸಲು ಜಿಲ್ಲಾಡಳಿತ ಈಗಾಗಲೇ ಎರಡು ಬಾರಿ ಮಹತ್ವದ ಸಭೆ ನಡೆಸಿದೆ. ಜಿಲ್ಲಾಧಿಕಾರಿ ಸಂಗಪ್ಪ ಅವರು ನೀಡಿರುವ ಮಾಹಿತಿಯಂತೆ, ಏಪ್ರಿಲ್ ತಿಂಗಳಿನಲ್ಲಿ 52 ಹಳ್ಳಿಗಳಲ್ಲಿ ಹಾಗೂ ಮೇ ತಿಂಗಳಿನಲ್ಲಿ 62 ಗ್ರಾಮಗಳು ಸೇರಿ ಒಟ್ಟು 114 ಹಳ್ಳಿಗಳಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆಯಿದೆ. ಈ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯ ಇಳಕಲ್ ಮತ್ತು ಗುಳೇದಗುಡ್ಡದ ತಲಾ ಒಂದು ಗ್ರಾಮದಲ್ಲಿ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಕೆ ಆರಂಭಿಸಲಾಗಿದೆ.

ನೀರಿನ ಬವಣೆ ನೀಗಿಸಲು ನದಿಗಳಿಗೆ ನೀರು ಹರಿಸಲಾಗುತ್ತಿದ್ದು, ಏಪ್ರಿಲ್ 2 ರಂದು ಘಟಪ್ರಭಾ ನದಿಗೆ 1.10 ಟಿಎಂಸಿ ಹಾಗೂ ಏಪ್ರಿಲ್ 10 ರಂದು ಮಲಪ್ರಭಾ ನದಿಗೆ 1 ಟಿಎಂಸಿ ನೀರನ್ನು ಬಿಡಲಾಗಿದೆ. ಅಲ್ಲದೆ ಹಿಪ್ಪರಗಿ ಬ್ಯಾರೇಜ್‌ನಲ್ಲಿ ಸದ್ಯ 1.48 ಟಿಎಂಸಿ ನೀರು ಸಂಗ್ರಹವಿದ್ದು, ಮೇ ಅಂತ್ಯದವರೆಗೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಅಷ್ಟೊಂದು ದೊಡ್ಡ ಮಟ್ಟದ ತೊಂದರೆ ಉದ್ಭವಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ. ಸಾರ್ವಜನಿಕರು ಹನಿ ಹನಿ ನೀರನ್ನು ವ್ಯರ್ಥ ಮಾಡದೆ ಹಿತಮಿತವಾಗಿ ಬಳಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Tags:

error: Content is protected !!