ಬೆಳಗಾವಿ: ಬೆಳಗಾವಿಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಜನ್ಮದಿನದ ಸಂಭ್ರಮದಲ್ಲಿ ಇರಬೇಕಾದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಶ್ಚಯವಾಗಿದ್ದ ಮದುವೆ ಮನೆಯಲ್ಲಿ ಈಗ ಮಗಳ ಸಾವಿನ ಆಕ್ರಂದನ ಮುಗಿಲು ಮುಟ್ಟಿದೆ.

ಬೆಳಗಾವಿ ನಗರದ ಅಜಂ ನಗರದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ದಾರುಣ ಘಟನೆ ಸಂಭವಿಸಿದೆ. ಹುಕ್ಕೇರಿ ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ ನಾಯಕ (21) ಎಂಬ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿ ತನ್ನ ಜನ್ಮದಿನದಂದೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಳೆದ ಮೂರು ತಿಂಗಳ ಹಿಂದಷ್ಟೇ ಈಕೆಗೆ ಪೊಲೀಸ್ ಪೇದೆಯೊಬ್ಬರ ಜೊತೆಗೆ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವೂ ನೆರವೇರಿತ್ತು. ಆದರೆ, ವೈಯಕ್ತಿಕ ಕಾರಣಗಳೋ ಅಥವಾ ಬೇರೇನಾದರೂ ಒತ್ತಡವೋ ಎಂಬುದು ಇನ್ನು ನಿಖರವಾಗಿ ತಿಳಿದುಬಂದಿಲ್ಲ. ಮಗಳ ಜನ್ಮದಿನಕ್ಕೆ ಶುಭಾಶಯ ಕೋರಬೇಕಿದ್ದ ಪೋಷಕರು, ಇಂದು ಆಕೆಯ ಶವ ನೋಡಿ ಆಕ್ರಂದನ ನಡೆಸುತ್ತಿರುವುದು ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿದೆ. (ಫ್ಲೋ)
ವಿಷಯ ತಿಳಿಯುತ್ತಿದ್ದಂತೆಯೇ ಎಪಿಎಂಸಿ ಪೊಲೀಸ್ ಠಾಣೆಯ ಸಿಪಿಐ ಉಸ್ಮಾನ್ ಆವಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲದ ಕಾರಣ ಸಾವಿನ ಸುತ್ತ ನಿಗೂಢತೆ ಆವರಿಸಿದೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

