ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಬವಣೆ ನೀಗಿಸಬೇಕಾದ ಕೆರೆಗಳು ಇಂದು ಅಕ್ಷರಶಃ ಬರಡು ಭೂಮಿಯಾಗಿ ಮಾರ್ಪಟ್ಟಿವೆ. ಒಂದೆಡೆ ಒತ್ತುವರಿ ಭೂತ ಕೆರೆಗಳನ್ನು ನುಂಗುತ್ತಿದ್ದರೆ, ಮತ್ತೊಂದೆಡೆ ಹೂಳು ಮತ್ತು ಮಣ್ಣು ಲೂಟಿಯಿಂದ ಕೆರೆಗಳ ಅಸ್ತಿತ್ವವೇ ಇಲ್ಲದಂತಾಗುತ್ತಿದೆ.

ಬೆಳಗಾವಿ ಜಿಲ್ಲೆಯಾದ್ಯಂತ ಒಟ್ಟು 1,132 ಕೆರೆಗಳಿದ್ದು, ಇವುಗಳಲ್ಲಿ ಬಹುತೇಕ ಕೆರೆಗಳು ಇಂದು ಅಳಿವಿನ ಅಂಚಿನಲ್ಲಿವೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಸುಮಾರು 134 ಕೆರೆಗಳು ಈಗಾಗಲೇ ಸಂಪೂರ್ಣ ಒತ್ತುವರಿಯಾಗಿದ್ದು, ಉಳಿದ 87 ಕೆರೆಗಳ ತೆರವು ಕಾರ್ಯಾಚರಣೆ ಕೇವಲ ಕಾಗದದ ಮೇಲಷ್ಟೇ ಉಳಿದಿದೆ. ಜಿಲ್ಲೆಯ 50ಕ್ಕೂ ಹೆಚ್ಚು ಕೆರೆಗಳನ್ನು ರೈತರು ಮತ್ತು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಧಿಕಾರಿಗಳು ‘ಲ್ಯಾಂಡ್ ಬೀಟ್’ ಆ್ಯಪ್ ಮತ್ತು ನರೇಗಾ ಯೋಜನೆಯಡಿ ಸಂರಕ್ಷಣೆಯ ಮಾತುಗಳನ್ನಾಡುತ್ತಿದ್ದರೂ, ವಾಸ್ತವದಲ್ಲಿ ಚಿಕ್ಕಬಾಗೇವಾಡಿಯಂತಹ ಪ್ರಮುಖ ಕೆರೆಗಳು ನೀರಿಲ್ಲದೇ ಸಂಪೂರ್ಣವಾಗಿ ಬತ್ತಿ ಹೋಗಿರುವುದು ಆಡಳಿತ ಯಂತ್ರದ ವಿಫಲತೆಗೆ ಹಿಡಿದ ಕನ್ನಡಿಯಾಗಿದೆ.


ಮತ್ತೊಂದೆಡೆ, ಕೆರೆಗಳ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳು ಕಣ್ಣೊರೆಸುವ ತಂತ್ರದಂತಿದೆ. ಕೆರೆಗಳಲ್ಲಿ ಹೂಳು ತೆಗೆಯುವ ಪ್ರಕ್ರಿಯೆ ನಡೆಯದ ಕಾರಣ ನೀರಿನ ಸಂಗ್ರಹಣಾ ಸಾಮರ್ಥ್ಯ ಕುಸಿದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ಮತ್ತು ಮಣ್ಣು ಮಾಫಿಯಾ, ರಾತ್ರೋರಾತ್ರಿ ಕೆರೆಗಳಿಂದ ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ತಾಂತ್ರಿಕ ಸಬೂಬುಗಳನ್ನು ನೀಡುತ್ತಿದ್ದರೂ, ಹನಿ ನೀರಿಲ್ಲದೇ ಬಾಯಾರುತ್ತಿರುವ ಕೆರೆಗಳು ಮತ್ತು ಅತಿಕ್ರಮಣಕ್ಕೊಳಗಾದ ಜಾಗಗಳನ್ನು ನೋಡಿದರೆ ಜಿಲ್ಲಾಡಳಿತವು ಕೆರೆಗಳ ರಕ್ಷಣೆಯಲ್ಲಿ ಸಂಪೂರ್ಣವಾಗಿ ಸೋತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಜಿಲ್ಲೆಯ ನೀರಿನ ಮೂಲಗಳು ಕೇವಲ ಇತಿಹಾಸದ ಪುಟ ಸೇರುವುದರಲ್ಲಿ ಸಂಶಯವಿಲ್ಲ.
