ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ನೀರಾವರಿ ಯೋಜನೆಯೊಂದು ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಐದು ವರ್ಷಗಳೇ ಕಳೆದರೂ ಪೂರ್ಣಗೊಳ್ಳದ ಸಾಲಪೂರ ಏತ ನೀರಾವರಿ ಯೋಜನೆಯಿಂದಾಗಿ, ಇತ್ತ ನೀರು ಸಿಗದೆ ಅತ್ತ ಬೆಳೆಗಳನ್ನು ಬೆಳೆಯಲಾಗದೆ ಅನ್ನದಾತರು ಕಣ್ಣೀರಿಡುತ್ತಿದ್ದಾರೆ. ಜಿಲ್ಲಾಡಳಿತದ ಮೌನಕ್ಕೆ ರೈತರ ಆಕ್ರೋಶ ಹೇಗಿದೆ ನೋಡಿ…


ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಕ್ಕೂರ ಗ್ರಾಮ ಸೇರಿದಂತೆ ನಾಲ್ಕೈದು ಹಳ್ಳಿಗಳ ರೈತರು ಸಾಲಪೂರ ಏತ ನೀರಾವರಿ ಯೋಜನೆಯಿಂದಾಗಿ ದಿಕ್ಕೆಟ್ಟು ಹೋಗಿದ್ದಾರೆ. ಆರಂಭದಲ್ಲಿ ರೈತರ ವಿರೋಧವಿದ್ದರೂ ಸಹ ತರಾತುರಿಯಲ್ಲಿ ಭೂಸ್ವಾಧೀನ ನೋಟಿಸ್ ನೀಡಿ ಆರಂಭಿಸಿದ ಈ ಯೋಜನೆ, ಈಗ ಅರ್ಧಕ್ಕೆ ನಿಂತು ಹೋಗಿದೆ. ಘಟಪ್ರಭಾ ನದಿಯ ದಡದಲ್ಲಿ ಯೋಜನೆಯ ಕಾಮಗಾರಿಗಾಗಿ ಅಗೆದ ಗುಂಡಿಗಳು ಮತ್ತು ನಿರ್ಮಿಸಿದ ತಡೆಗೋಡೆಯಿಂದಾಗಿ ಹಿನ್ನೀರು ನುಗ್ಗಿ ಸುಮಾರು 300 ಎಕರೆ ಜಮೀನಿನ ಬೆಳೆ ನಾಶವಾಗಿದೆ. ರೈತರ ಹೊಲಗಳಲ್ಲಿಯೇ ಬಿದ್ದಿರುವ ಬೃಹತ್ ಗಾತ್ರದ ಪೈಪ್ಗಳು ಹಾಗೂ ಅಗೆದು ಬಿಟ್ಟಿರುವ ಪೈಪ್ಲೈನ್ ಗುಂಡಿಗಳು ಅನ್ನದಾತನ ಹೊಲವನ್ನು ಹಾಳುಗೆಡವಿವೆ.
ಕಾಮಗಾರಿ ಹಿಡಿದ ಗುತ್ತಿಗೆದಾರರ ನಿರ್ಲಕ್ಷ್ಯ ಮತ್ತು ನೀರಾವರಿ ಇಲಾಖೆಯ ಬೇಜವಾಬ್ದಾರಿತನದಿಂದಾಗಿ ಈ ಪ್ರದೇಶದಲ್ಲಿ ಈಗ ನೀರಿಗಾಗಿ ಹಾಹಾಕಾರ ಶುರುವಾಗುವ ಭೀತಿ ಎದುರಾಗಿದೆ. ಬೆಳೆಹಾನಿಯಿಂದ ಕಂಗಾಲಾಗಿರುವ ಚಿಕ್ಕೂರ, ಚಿತ್ರಬಾನುಕೋಟೆ ಮತ್ತು ಕೆಡಿ ಬುದ್ನಿ ಗ್ರಾಮದ ರೈತರು ತಕ್ಷಣವೇ ತಮಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ನೀರಾವರಿ ಯೋಜನೆಯನ್ನು ಶಾಶ್ವತವಾಗಿ ಸರಿಪಡಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸಂತ್ರಸ್ತ ರೈತರು ಎಚ್ಚರಿಕೆ ನೀಡಿದ್ದಾರೆ

