1. ತಮಿಳುನಾಡು 9ನೇ ಮುಖ್ಯಮಂತ್ರಿಯಾಗಿ ವಿಜಯ್ ಪದಗ್ರಹಣ
2. ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಥಳಪತಿ
3. ಹಿಂದಿನ ಸರ್ಕಾರದ ಸಾಲದ ವಿರುದ್ಧ ಶ್ವೇತಪತ್ರದ ಎಚ್ಚರಿಕೆ
4. ತಮಿಳುನಾಡಿನಲ್ಲಿ ಇಂದಿನಿಂದ ‘ಟಿವಿಕೆ’ ಪಾರದರ್ಶಕ ಆಡಳಿತ

ತಮಿಳುನಾಡು ರಾಜಕೀಯದಲ್ಲಿ ಇಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಜಯ ದಾಖಲಿಸಿದ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ಇಂದು ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಚೆನ್ನೈನಲ್ಲಿ ಅದ್ಧೂರಿ ಪ್ರಮಾಣವಚನ ಸಮಾರಂಭ ಜರುಗಿತು.
ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ವಿಜಯ್ ಹಾಗೂ ಅವರ ಒಂಬತ್ತು ಸದಸ್ಯರ ಸಚಿವ ಸಂಪುಟಕ್ಕೆ ಪ್ರಮಾಣ ವಚನ ಬೋಧಿಸಿದರು. ಈ ಸಂಪುಟದಲ್ಲಿ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್ ಅವರ ಅನುಭವ ಹಾಗೂ ಡಾ. ಟಿ.ಕೆ. ಪ್ರಭು ಮತ್ತು ಎಸ್. ಕೀರ್ತನಾ ಅವರಂತಹ ಯುವ ಉತ್ಸಾಹದ ಸಮಿಶ್ರಣವಿದೆ. ವಿಶೇಷವೆಂದರೆ, ವಿಜಯ್ ಮತ್ತು ಅವರ ಸಚಿವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಹಿಂದಿನ ಡಿಎಂಕೆ ಸರ್ಕಾರದ ಸಂಪ್ರದಾಯಕ್ಕಿಂತ ಭಿನ್ನವಾಗಿ ಗಮನ ಸೆಳೆದರು. ಈ ಐತಿಹಾಸಿಕ ಕ್ಷಣಕ್ಕೆ ರಾಹುಲ್ ಗಾಂಧಿ, ನಟಿ ತ್ರಿಶಾ ಕೃಷ್ಣನ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು.
ಅಧಿಕಾರ ಸ್ವೀಕರಿಸಿದ ಬಳಿಕ ಗರ್ಜಿಸಿದ ಮುಖ್ಯಮಂತ್ರಿ ವಿಜಯ್, “ನಾನು ರಾಜಮನೆತನದಿಂದ ಬಂದವನಲ್ಲ, ಆದರೂ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ಸುಳ್ಳು ಭರವಸೆ ನೀಡಿ ಜನರನ್ನು ಮೋಸಗೊಳಿಸುವುದಿಲ್ಲ” ಎಂದು ಭಾವುಕರಾಗಿ ನುಡಿದರು. ಇದೇ ವೇಳೆ ಡಿಎಂಕೆ ಸರ್ಕಾರದ ವಿರುದ್ಧ ವೀಕ್ಷಣಾ ಪ್ರಹಾರ ನಡೆಸಿದ ಅವರು, ರಾಜ್ಯದ ಮೇಲಿರುವ 10 ಲಕ್ಷ ಕೋಟಿ ಸಾಲದ ಬಗ್ಗೆ ‘ಶ್ವೇತಪತ್ರ’ ಹೊರಡಿಸುವುದಾಗಿ ಘೋಷಿಸಿದರು. ರಾಜ್ಯದಲ್ಲಿ ಡ್ರಗ್ಸ್ ನಿರ್ಮೂಲನೆ ಮಾಡುವುದು ಮತ್ತು ಪಾರದರ್ಶಕ, ಜಾತ್ಯತೀತ ಹಾಗೂ ಸಾಮಾಜಿಕ ನ್ಯಾಯದ ಆಡಳಿತ ನೀಡುವುದು ತಮ್ಮ ಮೊದಲ ಆದ್ಯತೆ ಎಂದು ವಿಜಯ್ ಭರವಸೆ ನೀಡಿದರು.

