• ಖತರ್ನಾಕ್ ಅಂತಾರಾಜ್ಯ ಮನೆಗಳ್ಳರ ಬಂಧನ.
• ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ.
• ಎಪಿಎಂಸಿ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ.
• ಮಹಾರಾಷ್ಟ್ರ ಮೂಲದ ಮೂವರು ವಶಕ್ಕೆ.

ಬೆಳಗಾವಿಯ ಕುವೆಂಪು ನಗರದಲ್ಲಿ ನಡೆದಿದ್ದ ನಿವೃತ್ತ ಪ್ರಾಧ್ಯಾಪಕರ ಮನೆಗಳ್ಳತನ ಪ್ರಕರಣವನ್ನು ಎಪಿಎಂಸಿ ಪೊಲೀಸರು ಕೇವಲ ಐದೇ ದಿನಗಳಲ್ಲಿ ಭೇದಿಸಿದ್ದಾರೆ. ಮಹಾರಾಷ್ಟ್ರ ಮೂಲದ ಮೂವರು ಖತರ್ನಾಕ್ ಕಳ್ಳರನ್ನು ಹೆಡೆಮುರಿ ಕಟ್ಟಿರುವ ಪೊಲೀಸರು, ಅವರಿಂದ ಚಿನ್ನ, ಬೆಳ್ಳಿ ಹಾಗೂ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ನಗರದ ಕುವೆಂಪು ನಗರದ ನಿವೃತ್ತ ಪ್ರೊಫೆಸರ್ ಅರುಣ ಜಾಧವ ಅವರ ಮನೆಯಲ್ಲಿ ನಡೆದಿದ್ದ ಕಳ್ಳತನದ ಬೆನ್ನತ್ತಿದ ಎಪಿಎಂಸಿ ಠಾಣಾ ಇನ್ಸ್ಪೆಕ್ಟರ್ ಯು.ಎಸ್. ಅವಟಿ ನೇತೃತ್ವದ ತಂಡ, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ದೇವೆಂದ್ರ @ ಡೇಬ್ಯಾ, ಸಚೀನ ಗೌಳಿ ಮತ್ತು ಕಪೀಲ ಜಾಧವ ಎಂಬುವವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ₹1,67,186 ಮೌಲ್ಯದ ಬಂಗಾರದ ಆಭರಣಗಳು, ₹1,83,888 ಮೌಲ್ಯದ ಬೆಳ್ಳಿಯ ವಸ್ತುಗಳು ಹಾಗೂ ₹1.20 ಲಕ್ಷ ಮೌಲ್ಯದ ಎರಡು ಮೋಟಾರ್ ಸೈಕಲ್ಗಳು ಸೇರಿದಂತೆ ಒಟ್ಟು ₹4,71,074 ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಹೊಳೆನ್ನವರ, ಬೆರಳು ಮುದ್ರೆ ಘಟಕದ ಅಧಿಕಾರಿಗಳು ಹಾಗೂ ತಾಂತ್ರಿಕ ತಂಡದ ಚುರುಕಿನ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

