• ಬೆಳಗಾವಿಯಲ್ಲಿ ಖಾಕಿ ಪಡೆ ಭರ್ಜರಿ ಕಾರ್ಯಾಚರಣೆ
• ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಜಾಲ ಪತ್ತೆ
• ಗನ್ ಹಿಡಿದು ಬೆದರಿಸುತ್ತಿದ್ದವನ ಬಂಧನ
• ಮೂವರು ಆರೋಪಿಗಳು ಈಗ ಪೊಲೀಸ್ ವಶ
ಬೆಳಗಾವಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಐಪಿಎಲ್ ಬೆಟ್ಟಿಂಗ್ ದಂಧೆಕೋರರ ಮೇಲೆ ದಾಳಿ ನಡೆಸುವ ಜೊತೆಗೆ, ಸಾರ್ವಜನಿಕವಾಗಿ ರಿವಾಲ್ವರ್ ಹಿಡಿದು ಅಲೆದಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ನಗರದ ಮಾರ್ಕೆಟ್ ಮತ್ತು ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮಹಮ್ಮದಸಾದಿಕ ಬಂದೇನವಾಜ ಮಲ್ಲಡದವರ, ಮೋಸೀನ್ ಮಹಮ್ಮದಹನೀಫ ಖಲೀಪಾ ಮತ್ತು ಸೂಫಿಯಾನ್ ಶೇಖ ಎಂಬುವವರನ್ನು ಮಾರ್ಕೆಟ್ ಠಾಣೆಯ ಪಿಎಸ್‌ಐ ಹುಸೇನಸಾಬ ಕೆರೂರ ನೇತೃತ್ವದ ತಂಡ ಬಂಧಿಸಿ, ಅವರಿಂದ ಎರಡು ಮೊಬೈಲ್ ಹಾಗೂ ನಗದು ಹಣವನ್ನು ವಶಪಡಿಸಿಕೊಂಡಿದೆ. ಮತ್ತೊಂದೆಡೆ, ನಗರದ ಕಾಲೇಜು ರಸ್ತೆಯಲ್ಲಿ ಸಾರ್ವಜನಿಕವಾಗಿ ರಿವಾಲ್ವರ್ ಹಿಡಿದು ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದ ಗೋಕಾಕ್ ಮೂಲದ ಶಂಕರ ಬಸವರಾಜ ಬಂಡಿವಡ್ಡರ ಎಂಬಾತನನ್ನು ಖಡೇಬಜಾರ್ ಠಾಣೆಯ ಸಿಪಿಸಿ ಸುನೀಲ ಕನ್ನಿರಾಮ ಚವ್ಹಾನ್ ಮತ್ತು ತಂಡ ಸಿನಿಮೀಯ ಮಾದರಿಯಲ್ಲಿ ಬಂಧಿಸಿ ರಿವಾಲ್ವರ್ ಜಪ್ತಿ ಮಾಡಿದ್ದಾರೆ. ಕರ್ತವ್ಯದಕ್ಷತೆ ಮೆರೆದ ಈ ತಂಡಗಳನ್ನು ಬೆಳಗಾವಿ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ.

