• ಬೆಳಗಾವಿ ಉತ್ತರ ವಲಯಕ್ಕೆ ನೂತನ ಐಜಿಪಿ
• ಐಜಿಪಿ ಸಂದೀಪ್ ಪಾಟೀಲ್ ವರ್ಗಾವಣೆ ಆದೇಶ
• ಚೇತನ್ ಸಿಂಗ್ ರಾಥೋರ್ ಸಿಐಡಿಗೆ ವರ್ಗಾವಣೆ
• ಅನುಪಮ್ ಅಗ್ರವಾಲ್ ಕೆಎಸ್ಆರ್ಪಿ ಐಜಿಪಿಯಾಗಿ ನೇಮಕ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಹಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಉತ್ತರ ವಲಯದ ಐಜಿಪಿಯಾಗಿದ್ದ ಡಾ. ಚೇತನ್ ಸಿಂಗ್ ರಾಥೋರ್ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಹಿರಿಯ ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ.
ಕರ್ನಾಟಕ ಸರ್ಕಾರವು ಬುಧವಾರದಂದು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಅಧಿಸೂಚನೆ ಹೊರಡಿಸಿದ್ದು, ಅದರಂತೆ 2004ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರು ಬೆಳಗಾವಿ ಉತ್ತರ ವಲಯದ ನೂತನ ಪೊಲೀಸ್ ಮಹಾನಿರೀಕ್ಷಕರಾಗಿ (ಐಜಿಪಿ) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಈ ಹುದ್ದೆಯಲ್ಲಿದ್ದ ಡಾ. ಚೇತನ್ ಸಿಂಗ್ ರಾಥೋರ್ ಅವರನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗದ ಐಜಿಪಿಯಾಗಿ ವರ್ಗಾಯಿಸಲಾಗಿದೆ. ಇದರೊಂದಿಗೆ ನೇಮಕಾತಿಯ ನಿರೀಕ್ಷೆಯಲ್ಲಿದ್ದ ಅನುಪಮ್ ಅಗ್ರವಾಲ್ ಅವರಿಗೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಐಜಿಪಿಯಾಗಿ ಜವಾಬ್ದಾರಿ ನೀಡಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ತಕ್ಷಣದ ವರ್ಗಾವಣೆಗಳು ಜಾರಿಗೆ ಬರಲಿವೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ. ಎಸ್. ಆದೇಶದಲ್ಲಿ ತಿಳಿಸಿದ್ದಾರೆ.

