• ಬೆಳಗಾವಿಯ ಅಮನ್ ನಗರದಲ್ಲಿ ತಲ್ವಾರ್ ಹಲ್ಲೆ
• ಮೂವರು ಯುವಕರ ಮೇಲೆ ಮಾರಣಾಂತಿಕ ದಾಳಿ
• ಒಂದೇ ಗಂಟೆಯಲ್ಲಿ ಆರು ಆರೋಪಿಗಳ ಬಂಧನ
• ದಾಂಧಲೆಕೋರರ ವಿರುದ್ಧ ರೌಡಿ ಕೇಸ್ ಓಪನ್

ಬೆಳಗಾವಿಯ ಅಮನ್ ನಗರದಲ್ಲಿ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮೂವರು ಯುವಕರ ಮೇಲೆ ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಲಾದ ಭೀಕರ ಘಟನೆ ಮಂಗಳವಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಕೇವಲ ಒಂದು ಗಂಟೆಯ ಅವಧಿಯಲ್ಲಿ ಆರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ದಿನಾಂಕ 5 ಮೇ 2026 ರಂದು ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ವಾಗ್ವಾದ ಸಂಭವಿಸಿತ್ತು. ಈ ವೇಳೆ ಆರೋಪಿಗಳಾದ ಹುಸೇನ್, ಜಾವೀದ್ ಸೇರಿದಂತೆ ಎಂಟು ಜನರ ತಂಡವು ಮಜೀದ್ ಶೇಖ್ ಹಾಗೂ ಇತರರ ಮೇಲೆ ತಲ್ವಾರ್‌ನಿಂದ ಹಲ್ಲೆ ನಡೆಸಿತ್ತು. ಘಟನೆಯಲ್ಲಿ ಅಮನ್ ನಗರದ ವಲಿ ಶೇಖ್, ಇಮಾಮ್ ಶೇಖ್ ಮತ್ತು ಮಜೀದ್ ಶೇಖ್ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಒಂದು ಗಂಟೆಯಲ್ಲೇ ಮಾಳಮಾರುತಿ ಪಿಐ ನೇತೃತ್ವದ ತಂಡ ಆರು ಆರೋಪಿಗಳನ್ನು ಸೆರೆಹಿಡಿದಿದೆ. ಈ ಗಲಾಟೆಗೆ ಸಂಬಂಧಿಸಿದಂತೆ ದೂರು ಮತ್ತು ಪ್ರತಿದೂರುಗಳು ದಾಖಲಾಗಿದ್ದು, ಕೊಲೆಯತ್ನ ಹಾಗೂ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಜಗಳದಲ್ಲಿ ತಲ್ವಾರ್ ಬಳಸಿದವರ ವಿರುದ್ಧ ರೌಡಿ ಶೀಟ್ ತೆರೆಯುವುದಾಗಿ ಕಮೀಷನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

