Belagavi

ಕಡೋಲಿಯ ಮೈದಾನದಲ್ಲಿ ‘RSJ ಟ್ರೋಫಿ’ ಕ್ರಿಕೆಟ್ ಹಬ್ಬ: ಹಿರಿಯ ಯುವಕರ ಆಟಕ್ಕೆ ಬೆಳಗಾವಿ ಫಿದಾ!

Share

ಬೆಳಗಾವಿ ಜಿಲ್ಲೆಯ ಕಡೋಲಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ್ ಕ್ರೀಡಾಂಗಣದಲ್ಲಿ 35 ವರ್ಷ ಮೇಲ್ಪಟ್ಟವರಿಗಾಗಿ ಆಯೋಜಿಸಲಾಗಿದ್ದ ‘RSJ ಟ್ರೋಫಿ’ ಫುಲ್ ಪೀಚ್ ಕ್ರಿಕೆಟ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಈ ಪಂದ್ಯಾವಳಿಯು ಹತ್ತು ದಿನಗಳ ಕಾಲ ಕ್ರೀಡಾ ಪ್ರೇಮಿಗಳನ್ನು ರಂಜಿಸಿತು.
ಸುದ್ದಿ ಸಾರಾಂಶ: ಯುವ ನಾಯಕ ಹಾಗೂ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಅವರ ಸಾರಥ್ಯದಲ್ಲಿ ನಡೆದ ಈ ಪಂದ್ಯಾವಳಿಯು ‘ಒಂದು ಗ್ರಾಮ, ಒಂದು ತಂಡ’ ಎಂಬ ಪರಿಕಲ್ಪನೆಯಡಿ ಗ್ರಾಮೀಣ ಭಾಗದ ಕ್ರೀಡಾ ಸ್ಪೂರ್ತಿಯನ್ನು ಬಡಿದೆಬ್ಬಿಸಿತು. ಸಮಾರೋಪ ಸಮಾರಂಭದಲ್ಲಿ ಕೆಪಿಸಿಸಿ ಸದಸ್ಯ ಮಲಗೌಡಾ ಪಾಟೀಲ್ ಮಾತನಾಡಿ, “ರಾಹುಲ್ ಜಾರಕಿಹೊಳಿ ಅವರು ಗ್ರಾಮೀಣ ಯುವಕರು ರಾಜ್ಯ ಮತ್ತು ರಾಷ್ಟ್ರ ಮಟ್ಟಕ್ಕೆ ಬೆಳೆಯಲು ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ಹಿರಿಯ ಯುವಕರಿಗಾಗಿ ಇಂತಹ ವಿಭಿನ್ನ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ” ಎಂದು ಕ್ರೀಡಾಳುಗಳ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಭಾರಿ ಮೊತ್ತದ ನಗದು ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವಾಗಿ 31,000 ರೂ., ದ್ವಿತೀಯ 15,500 ರೂ. ಹಾಗೂ ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದ ತಂಡಗಳಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು. ವೈಯಕ್ತಿಕ ವಿಭಾಗದಲ್ಲಿ ಅತ್ಯುತ್ತಮ ಬ್ಯಾಟರ್, ಬೌಲರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅರುಣ್ ಅಣ್ಣು ಕಾಂಬಳೆ, ಬಸವಂತ ಮಾಯಣ್ಣವರ, ಶಿವಾಜಿ ಕುಟ್ರಿ ಸೇರಿದಂತೆ ಹಲವು ಗಣ್ಯರು ಹಾಗೂ ಕಡೋಲಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಕ್ರೀಡಾ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Tags:

error: Content is protected !!