• ಬೆಳಗಾವಿಯಲ್ಲಿ ಗುಡುಗು ಸಹಿತ ಭಾರಿ ಮಳೆ.
• ಮಾರುಕಟ್ಟೆ ಪ್ರದೇಶದಲ್ಲಿ ನುಗ್ಗಿದ ಮಳೆ ನೀರು.
• ಕೆರೆಯಂತಾದ ರಸ್ತೆಗಳು: ಸಂಚಾರ ಸಂಪೂರ್ಣ ಅಸ್ತವ್ಯಸ್ತ.
• ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಮಳೆಯ ಸಂಕಷ್ಟ.
ಕಳೆದ ಕೆಲವು ದಿನಗಳಿಂದ ಸುಡುತ್ತಿರುವ ಬಿಸಿಲಿನಿಂದ ಕಂಗೆಟ್ಟಿದ್ದ ಬೆಳಗಾವಿ ಜನತೆಗೆ ವರುಣದೇವ ತಂಪೆರೆದಿದ್ದಾನೆ. ನಗರದಲ್ಲಿ ಸಂಜೆ ವೇಳೆಗೆ ಏಕಾಏಕಿ ಕಾಣಿಸಿಕೊಂಡ ಗುಡುಗು ಸಿಡಿಲು ಸಹಿತ ಮಳೆ ಧರೆಗೆ ಅಪ್ಪಳಿಸಿದ್ದು, ಬಿಸಿಲಿನ ಬೇಗೆಯಿಂದ ಮುಕ್ತಿ ನೀಡಿದೆಯಾದರೂ, ನಗರದ ಜನಜೀವನವನ್ನು ಮಾತ್ರ ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದೆ.
ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಇಂದು ಸಂಜೆ ಭಾರಿ ಮಳೆಯಾಗಿದೆ. ಸತತವಾಗಿ ಸುರಿದ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಚರಿಸಲು ಹರಸಾಹಸ ಪಡುವಂತಾಯಿತು. ವಿಶೇಷವಾಗಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಮಳೆ ನೀರು ಹರಿದು ಬಂದ ಕಾರಣ ವ್ಯಾಪಾರಸ್ಥರು ಮತ್ತು ಗ್ರಾಹಕರು ತೀವ್ರ ಸಂಕಷ್ಟ ಎದುರಿಸಿದರು. ಚರಂಡಿಗಳು ತುಂಬಿ ಹರಿದು ನೀರು ರಸ್ತೆಯ ಮೇಲೆ ನಿಂತಿದ್ದರಿಂದ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಮಳೆಯಿಂದಾಗಿ ವಾತಾವರಣ ತಂಪಾಗಿದ್ದರೂ, ಮಳೆಯ ಆರ್ಭಟಕ್ಕೆ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿ ಜನಜೀವನ ವ್ಯತ್ಯಯಗೊಂಡಿದೆ.

