• ಬೆಳಗಾವಿಯ ಗಣೇಶ ಮಂದಿರಗಳಲ್ಲಿ ವಿಶೇಷ ಪೂಜೆ
• ಹನ್ನೆರಡು ಸಂಕಷ್ಟಿಗಳ ಪುಣ್ಯಫಲ ನೀಡುವ ದಿನ
• ರಾಣಿ ಚೆನ್ನಮ್ಮ ವೃತ್ತದ ಗಣೇಶನಿಗೆ ಅಲಂಕಾರ
• ದರ್ಶನಕ್ಕಾಗಿ ಹಿಂಡಲಗಾದಲ್ಲಿ ಭಕ್ತರ ಸರತಿ ಸಾಲು

ಕುಂದಾನಗರಿ ಬೆಳಗಾವಿಯಲ್ಲಿ ಇಂದು ಅಂಗಾರಿಕಾ ಸಂಕಷ್ಟಿ ಚತುರ್ಥಿಯನ್ನು ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಗುತ್ತಿದೆ. ನಗರದ ಪ್ರಸಿದ್ಧ ಗಣೇಶ ಮಂದಿರಗಳಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಹಾಗೂ ಅಲಂಕಾರಗಳು ನೆರವೇರುತ್ತಿದ್ದು, ವಿಘ್ನನಿವಾರಕನ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದಾರೆ.
ಮಂಗಳವಾರದಂದು ಬರುವ ಈ ‘ಅಂಗಾರಿಕಾ ಸಂಕಷ್ಟಿ’ಯು ಹನ್ನೆರಡು ಸಂಕಷ್ಟಿಗಳ ಪುಣ್ಯಫಲವನ್ನು ನೀಡುತ್ತದೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಬೆಳಗಾವಿಯ ಗಣೇಶ ಮಂದಿರಗಳಲ್ಲಿ ಭಕ್ತರ ದಂಡೇ ನೆರೆದಿದೆ. ನಗರದ ಹೃದಯಭಾಗವಾದ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಸಿದ್ಧಿವಿನಾಯಕ ಮಂದಿರ, ಹಿಂಡಲಗಾದ ಸುಪ್ರಸಿದ್ಧ ವಿನಾಯಕ ಮಂದಿರ ಹಾಗೂ ಹರಿದ್ರಾ ಗಣೇಶ ಸೇರಿದಂತೆ ಜಿಲ್ಲೆಯಾದ್ಯಂತ ಗಣಪತಿಯ ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ. ಮುಂಜಾನೆಯಿಂದಲೇ ಗಣಪತಿಗೆ ಅಭಿಷೇಕ, ಹೋಮ-ಹವನ ಹಾಗೂ ವಿಶೇಷ ಪುಷ್ಪಾಲಂಕಾರಗಳನ್ನು ಮಾಡಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಪ್ರತಿ ಮಂದಿರಗಳಲ್ಲಿಯೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ಸಂಜೆಯ ಚಂದ್ರೋದಯದವರೆಗೂ ಈ ಧಾರ್ಮಿಕ ವಿಧಿವಿಧಾನಗಳು ಮುಂದುವರಿಯಲಿವೆ. ಸಾವಿರಾರು ಭಕ್ತರ ಆಗಮನದಿಂದಾಗಿ ಮಂದಿರಗಳ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಸುಗಮ ದರ್ಶನಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
