• ದೇವರ ಹಿಪ್ಪರಗಿಯಲ್ಲಿ ರೈತನ ತೋಟ ನಾಶ
• 100ಕ್ಕೂ ಹೆಚ್ಚು ಬಾಳೆ ಗಿಡಗಳ ಕಡಿತ
• ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ
• ಪರಿಹಾರಕ್ಕಾಗಿ ಕಣ್ಣೀರಿಡುತ್ತಿರುವ ಸಂಕಷ್ಟದ ರೈತ

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಬೊಮ್ಮನ ಜೋಗಿ ಗ್ರಾಮದ ಹೊರಭಾಗದಲ್ಲಿ ರೈತನೊಬ್ಬನ ಪರಿಶ್ರಮಕ್ಕೆ ದುಷ್ಕರ್ಮಿಗಳು ಹೀನ ಕೃತ್ಯದ ಮೂಲಕ ಆಘಾತ ನೀಡಿದ್ದಾರೆ.
ಅಪ್ಪಾಸಾಹೇಬ್ ಬಿರಾದಾರ ಅವರ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ತೋಟಕ್ಕೆ ಕಿಡಿಗೇಡಿಗಳು ನುಗ್ಗಿ ಸುಮಾರು 100ಕ್ಕೂ ಹೆಚ್ಚು ಬಾಳೆ ಗಿಡಗಳನ್ನು ಕಡಿದು ನಾಶಪಡಿಸಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಸಾಲ ಮಾಡಿ ನೆಟ್ಟಿದ್ದ 450 ಬಾಳೆ ಗಿಡಗಳಲ್ಲಿ ಬಹುಪಾಲು ಚೆನ್ನಾಗಿ ಬೆಳೆದಿದ್ದವು. ಆದರೆ ತಡರಾತ್ರಿ ನಡೆದ ಈ ದುಷ್ಕೃತ್ಯದಿಂದ ರೈತನಿಗೆ ಅಂದಾಜು 1 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ. ಬೆಳೆಯ ಮೇಲೆ ಅವಲಂಬಿತವಾಗಿದ್ದ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ.
ಈ ಕುರಿತು ಮಾತನಾಡಿದ ರೈತ ಅಪ್ಪಾಸಾಹೇಬ್, ಸಾಲ ಮಾಡಿ ಬೆಳೆದ ಬೆಳೆ ಹಾಳಾಗಿದೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಘಟನೆ ದೇವರ ಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
