• ಬೆಳಗಾವಿಯಲ್ಲಿ ಹೆಚ್ಚಿದ ರಣ ಬಿಸಿಲಿನ ಕಾಟ
• ಬಿಸಿಲಿಗೆ ಹೈರಾಣಾದ ಸಾರ್ವಜನಿಕರು ಮತ್ತು ಪೊಲೀಸರು
• ಟ್ರಾಫಿಕ್ ಪೊಲೀಸರ ಅದ್ಭುತ ಸೋಲಾರ್ ಕ್ಯಾಪ್
• ಪೊಲೀಸ್ ಶೈಲೇಶ ಸದಲಗಿ ಐಡಿಯಾಗೆ ಮೆಚ್ಚುಗೆ

ಕುಂದಾನಗರಿ ಬೆಳಗಾವಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ. ಇಂತಹ ರಣಬಿಸಿಲಿನಲ್ಲೂ ರಸ್ತೆಯಲ್ಲಿ ನಿಂತು ಕರ್ತವ್ಯ ನಿರ್ವಹಿಸುವ ಪೊಲೀಸರ ನೆರವಿಗೆ ಈಗ ವಿಜ್ಞಾನ ಮತ್ತು ಹೊಸ ಆವಿಷ್ಕಾರ ಬಂದಿದೆ. ಟ್ರಾಫಿಕ್ ಪೊಲೀಸ್ ಶೈಲೇಶ ಸದಲಗಿ ಅವರು ಕಂಡುಕೊಂಡ “ಸೋಲಾರ್ ಪ್ಯಾನಲ್ ಕ್ಯಾಪ್” ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಬೆಳಗಾವಿಯಲ್ಲಿ ತಾಪಮಾನವು ಸದ್ಯ 36°C ಇಂದ 39°C ವರೆಗೆ ದಾಖಲಾಗುತ್ತಿದ್ದು, ಜನರು ತಂಪು ಪಾನೀಯ ಹಾಗೂ ಮನೆಗಳ ಆಶ್ರಯ ಪಡೆಯುತ್ತಿದ್ದಾರೆ. ಆದರೆ, ಸುಡುವ ಬಿಸಿಲನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಪೊಲೀಸರದ್ದಾಗಿದೆ. ಈ ಸವಾಲನ್ನು ಎದುರಿಸಲು ಟ್ರಾಫಿಕ್ ಪೊಲೀಸ್ ಶೈಲೇಶ ಸದಲಗಿ ಅವರು ಕಂಡುಕೊಂಡ “ಸೋಲಾರ್ ಪ್ಯಾನಲ್ ಕ್ಯಾಪ್” ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಶೇಷ ಟೋಪಿಯ ಮೇಲ್ಭಾಗದಲ್ಲಿರುವ ಸೌರ ಫಲಕವು ಸೂರ್ಯನ ಕಿರಣಗಳಿಂದ ಶಕ್ತಿಯನ್ನು ಪಡೆದು, ಟೋಪಿಗೆ ಅಳವಡಿಸಲಾದ ಸಣ್ಣ ಫ್ಯಾನ್ ಅನ್ನು ಚಾಲನೆ ಮಾಡುತ್ತದೆ. ಇದರಿಂದ ಕರ್ತವ್ಯದ ವೇಳೆ ತಲೆ ತಂಪಾಗಿರುವುದಲ್ಲದೆ, ಬಿಸಿಲಿನಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಬಹುದಾಗಿದೆ. ಶೈಲೇಶ ಅವರ ಈ ವಿನೂತನ ಪ್ರಯೋಗ ಮತ್ತು ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

