ಹರಿಹರ ಪಂಚಮಸಾಲಿ ಪೀಠಕ್ಕೆ ಹೊಸ ಸ್ವಾಮೀಜಿಯ ನೇಮಕಾತಿ ಕುರಿತು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಗುರುವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. “ಹರಿಹರ ಪಂಚಮಸಾಲಿ ಪೀಠಕ್ಕೆ ಪಟ್ಟಾಧಿಕಾರಿಯಾಗಲು ನನಗೆ ಅಧಿಕೃತ ಆಹ್ವಾನ ಬಂದಿಲ್ಲ. ಒಂದು ವೇಳೆ ಪೀಠದಿಂದ ಆಹ್ವಾನ ಬಂದರೆ, ಆ ಬಗ್ಗೆ ವಿಚಾರ ಮಾಡುತ್ತೇನೆ” ಎಂದು ಶ್ರೀಗಳು ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿಯ ಹಿರೇಮಠಕ್ಕೂ ಮತ್ತು ಹರಿಹರ ಪಂಚಮಸಾಲಿ ಪೀಠಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಹರಿಹರ ಪೀಠದ ಪ್ರಥಮ ಜಗದ್ಗುರು ಮಹಾಂತ ಸ್ವಾಮೀಜಿಯವರಿಂದ ಮನಗೂಳಿ ಮಠಕ್ಕೆ ಸಂಗನಬಸವ ಶ್ರೀಗಳು ನೇಮಕವಾಗಿದ್ದರು. ಇತ್ತೀಚೆಗೆ ಹರಿಹರದಲ್ಲಿ ನಡೆದ ಸಭೆಯಲ್ಲಿ ತಾವೂ ಕೂಡ ಭಾಗವಹಿಸಿದ್ದಾಗಿ ಶ್ರೀಗಳು ಸ್ಪಷ್ಟಪಡಿಸಿದ್ದಾರೆ

