ಬೆಳಗಾವಿ ಮಹಾನಗರದ ಆರೋಗ್ಯ, ನೈರ್ಮಲ್ಯ ದೃಷ್ಟಿಯಿಂದ ಹಸಿ ಕಸ ಬಳಸಿ ಗ್ಯಾಸ್ ಉತ್ಪಾದಿಸುವ ಘಟಕ ಸ್ಥಾಪನೆಗೆ ಗೇಲ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಹೇಳಿದರು.


ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಘಟಕ್ಕಾಗಿ 10 ಎಕರೆ ಜಾಗ ಗುರುತಿಸುವ ಕಾರ್ಯ ಪ್ರಗತಿ ಹಂತದಲ್ಲಿದೆ. ಇದರಿಂದ ನಗರದಲ್ಲಿನ ಕಸ ವಿಲೇವಾರಿ ಸಮಸ್ಯೆ ಕಡಿಮೆಯಾಗಲಿದೆ. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ನ ಜನವಸತಿ, ಮಾರುಕಟ್ಟೆ , ಕೈಗಾರಿಕೆ ಪ್ರದೇಶದಲ್ಲಿ ನಿತ್ಯ 215 ಟನ್ ಕಸ ಉತ್ಪಾದನೆಯಾಗುತ್ತಿದೆ. ಈ ಹಸಿ ಕಸವನ್ನು ಸಮರ್ಪಕವಾಗಿ ಬಳಸಿ ಗ್ಯಾಸ್ ತಯಾರಿಸಲು ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ 150 ಟನ್ ಸ್ಯಾಮರ್ಥದ ಗ್ಯಾಸ್ ತಯಾರಿಕಾ ಘಟಕ ಸ್ಥಾಪಿಸಲು 10 ಎಕರೆ ಜಾಗ ನೀಡಲು ರಾಜ್ಯ ಸರ್ಕಾರ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ನಗರದ ಹೊರ ವಲಯದಲ್ಲಿ ಜಾಗ ಗುರುತಿಸಲು ಕಾರ್ಯ ಆರಂಭಿಸಿದೆ ಎಂದರು.


