ಕುಂದಾನಗರಿ ಬೆಳಗಾವಿಯ ಬಿ.ಕೆ. ಕಂಗ್ರಾಳಿ ಗ್ರಾಮ ಈಗ ಭಕ್ತಿ ಪರವಶದಲ್ಲಿ ಮುಳುಗಿದೆ. ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಗ್ರಾಮದ ಆರಾಧ್ಯ ದೈವ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಆರಂಭವಾಗಿದ್ದು ಶ್ರೀದೇವಿಯ ಗದ್ಧುಗೆಯ ಮೇಲೆ ಆಸೀನಳಾಗಿದ್ದಾಳೆ.


ಬೆಳಗಾವಿ ತಾಲೂಕಿನ ಬಿ.ಕೆ. ಕಂಗ್ರಾಳಿ ಗ್ರಾಮದಲ್ಲಿ ಕಳೆದ 43 ವರ್ಷಗಳಿಂದ ಕಾಯುತ್ತಿದ್ದ ಕ್ಷಣಗಳು ಕೊನೆಗೂ ಸಾಕಾರಗೊಂಡಿವೆ. ಗ್ರಾಮದ ಇತಿಹಾಸದಲ್ಲಿ ಸುದೀರ್ಘ ಕಾಲದ ನಂತರ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ವೈಭವದಿಂದ ನಡೆಯುತ್ತಿದೆ. ಮೊನ್ನೆಯಷ್ಟೇ ದೇವಿಯ ಕಲ್ಯಾಣೋತ್ಸವ ಅದ್ದೂರಿಯಾಗಿ ನೆರವೇರಿದ್ದು, ನಿನ್ನೆ ಸಂಜೆ ರಥೋತ್ಸವದ ಮೂಲಕ ಗ್ರಾಮದಾದ್ಯಂತ ಸಂಚರಿಸಿದ ದೇವಿ, ಇದೀಗ ಭವ್ಯವಾದ ಗದ್ಧುಗೆಯ ಮೇಲೆ ಆಸೀನಳಾಗಿದ್ದಾಳೆ. ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಭವ್ಯ ಮಂಟಪ ಮತ್ತು ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರವು ಭಕ್ತಾದಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.


ದೇವಿಯ ದಿವ್ಯ ದರ್ಶನ ಪಡೆಯಲು ರಾಜ್ಯದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತ ಸಾಗರವೇ ಹರಿದು ಬರುತ್ತಿದೆ. ಮಹಿಳೆಯರು ಸಾಲು ಸಾಲಾಗಿ ನಿಂತು ದೇವಿಗೆ ಉಡಿ ತುಂಬಿ, ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಸಕಲ ಸಂಕಷ್ಟಗಳನ್ನು ದೂರ ಮಾಡಲೆಂದು ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಾರೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಇಂದಿನಿಂದ ಮುಂದಿನ ಏಳು ದಿನಗಳ ಕಾಲ ನಿರಂತರವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದೇವಿಯ ಜಾತ್ರೆಯ ಸಂಭ್ರಮ ಮುಂದುವರಿಯಲಿದೆ.

