Khanapur

ಖಾನಾಪುರ: ಎಸ್ಎಸ್ಎಲ್ಸಿಯಲ್ಲಿ ಗಂದಿಗವಾಡದ ವೈಷ್ಣವಿ ಮೇದಾರ್ ಸಾಧನೆ; ಪರೀಕ್ಷಾ ಕೇಂದ್ರಕ್ಕೇ ಈಕೆ ಟಾಪರ್!

Share

ಬಡತನ ಮತ್ತು ಗ್ರಾಮೀಣ ಹಿನ್ನೆಲೆ ಸಾಧನೆಗೆ ಎಂದಿಗೂ ಅಡ್ಡಿಯಾಗದು ಎಂಬುದನ್ನು ಖಾನಾಪುರ ತಾಲೂಕಿನ ಗಂದಿಗವಾಡದ ವಿದ್ಯಾರ್ಥಿನಿ ವೈಷ್ಣವಿ ಮೇದಾರ್ ಸಾಬೀತುಪಡಿಸಿದ್ದಾರೆ. 2026ನೇ ಸಾಲಿನ ಎಸ್ಎಸ್ಎಲ್ಸಿಕ ಪರೀಕ್ಷೆಯಲ್ಲಿ ಶೇ. 98.08ರಷ್ಟು ಅಂಕಗಳನ್ನು ಪಡೆಯುವ ಮೂಲಕ ಮುಗಳಿಹಾಳ ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಪರಮ ಜ್ಯೋತಿ ಪ್ರೌಢಶಾಲೆಯ ವಿದ್ಯಾರ್ಥಿನಿ ವೈಷ್ಣವಿ ಎಲ್ಲಪ್ಪ ಮೇದಾರ್, 625 ಅಂಕಗಳಿಗೆ 613 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. 1973ರಲ್ಲಿ ಆರಂಭವಾದ ಈ ಶಾಲೆಯ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತದ ಅಂಕಗಳನ್ನು ಗಳಿಸಿದ ಮೊದಲ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ವೈಷ್ಣವಿ ಪಾತ್ರರಾಗಿದ್ದಾರೆ. ಕುಲಕಸಬು ಮೇದಾರಿಕೆಯನ್ನು ನಂಬಿಕೊಂಡಿರುವ ಕುಟುಂಬದ ಹಿನ್ನೆಲೆಯ ಈಕೆ, ತಂದೆ ಎಲ್ಲಪ್ಪ ಮೇದಾರ್ ಅವರ ಪ್ರೋತ್ಸಾಹ ಹಾಗೂ ಶಾಲೆಯ ಗುರುಬಳಗದ ಮಾರ್ಗದರ್ಶನದಲ್ಲಿ ಈ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಸಾಧನೆಯನ್ನು ಕಂಡು ಇಡೀ ಗ್ರಾಮಸ್ಥರು ಹಾಗೂ ಶಾಲಾ ಮಂಡಳಿ ಹರ್ಷ ವ್ಯಕ್ತಪಡಿಸಿದೆ.

ವೈಷ್ಣವಿಯ ಕುಟುಂಬವು ಶೈಕ್ಷಣಿಕವಾಗಿ ಶ್ರೀಮಂತವಾಗಿದ್ದು, ತಂದೆ ಎಲ್ಲಪ್ಪ ಅವರು ಸತತ ಮೂರು ಬಾರಿ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರೆ, ಅವರ ಐವರು ಸಹೋದರರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. “ಶಿಕ್ಷಣವೇ ಶಕ್ತಿಯಾಗಿದ್ದು, ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಶಿಕ್ಷಣ ನೀಡಬೇಕು” ಎಂದು ಶಿಕ್ಷಣ ಇಲಾಖೆಯ ಕೆಇಎಸ್ ಅಧಿಕಾರಿ ಡಾ. ಮಹದೇವ ಮೇದಾರ್ ಹೆಮ್ಮೆಯಿಂದ ನುಡಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಂ. ನಾಯಕ್ ಹಾಗೂ ಜಿ.ಇ. ಸೊಸೈಟಿಯ ಅಧ್ಯಕ್ಷ ಉಮೇಶ್ ಮೂಲಿಮನಿ ಅವರ ವಿಶೇಷ ಮಾರ್ಗದರ್ಶನ ಈ ಸಾಧನೆಯ ಹಿಂದೆ ಎದ್ದು ಕಾಣುತ್ತಿದ್ದು, ಮುಗಳಿಹಾಳ ಪರೀಕ್ಷಾ ಕೇಂದ್ರದಲ್ಲಿ ಪ್ರಥಮ ಸ್ಥಾನ ಪಡೆದ ವೈಷ್ಣವಿಯವರನ್ನು ಗುರುಬಳಗ ಸನ್ಮಾನಿಸಿ ಗೌರವಿಸಿದೆ.

Tags:

error: Content is protected !!