BELAGAVI

ನಿಗದಿತ ಅವಧಿಯಲ್ಲಿ ಗಣತಿ ಪೂರ್ಣಗೊಳಿಸಿ : ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಸೂಚನೆ’

Share

ಸರ್ಕಾರದಿಂದ ಆದೇಶಿಸಲ್ಪಟ್ಟ ಮಹತ್ವದ ಗಣತಿ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ವಿವಿಧ ಸ್ತರದ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ಅವಧಿ ಒಳಗೆ ಕಾರ್ಯವನ್ನು ಪೂರ್ಣಗೊಳಿಸಲೇಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಎಲ್ಲ ಚಾರ್ಜ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಳಗಾವಿ ಮಹಾನಗರಪಾಲಿಕೆಯಲ್ಲಿ ಸೋಮವಾರ ನಡೆದ ಗಣತಿ ಕಾರ್ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣತಿದಾರರ ಕಾರ್ಯ ವೇಗ ಪಡೆಯಲು ವಿವಿಧ ಸ್ತರದ ಮೇಲಾಧಿಕಾರಿಗಳು ಹಾಗೂ ಸಿಬ್ಬಂದಿ ನಿರಂತರ ಸಂಪರ್ಕ ಮತ್ತು ಸಮನ್ವಯತೆಯಿಂದ ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.

ನಿಧಾನವಾಗಿರುವ ಬ್ಲಾಕ್ ಸಮಸ್ಯೆ ಬಗೆಹರಿಸಿ ಚುರುಕಿನಿಂದ ಕಾರ್ಯ ವಾಗುವಂತೆ ನೋಡಿಕೊಳ್ಳಬೇಕು. ನನಗೂ ಸೇರಿದಂತೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಪ್ರತಿನಿತ್ಯ ಸಂಜೆ ವರದಿ ನೀಡುವುದು ಕಡ್ಡಾಯವೆಂದ ಅವರು, ನೆಪ ಹೇಳದೆ ಸಿಬ್ಬಂದಿ ತಮಗೆ ವಹಿಸಿದ ಕಾರ್ಯಗಳನ್ನು ತ್ವರಿತವಾಗಿ ನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸಿ ವಿಳಂಬ ಮಾಡಿದರೆ ಕ್ರಮ ಖಚಿತ ಎಂಬ ಎಚ್ಚರಿಕೆಯನ್ನೂ ನೀಡಿದರು.

ಅವಧಿ ಒಳಗಾಗಿ ಗಣತಿ ಕಾರ್ಯ ಪೂರ್ಣಗೊಳಿಸಿದ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ ಅವರು, ಶೀಘ್ರವಾಗಿ ಅಂತಹ ಸಿಬ್ಬಂದಿಗೆ ಅಭಿನಂದನಾ ಪತ್ರ ನೀಡಿ ಗೌರವಿಸುವ ಕಾರ್ಯವನ್ನು ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಪಾಲಿಕೆ ಉಪ ಆಯುಕ್ತ (ಕಂದಾಯ), ನಗರ ಗಣತಿ ಅಧಿಕಾರಿ ಡಾ. ಸಿದ್ದು ಹುಲ್ಲೋಳಿ ಹಾಗೂ ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಬಿ.ಟಿ. ಅವರು, ಗಣತಿಯ ಎಲ್ಲ ಚಾರ್ಜ್ ಅಧಿಕಾರಿಗಳು ಕಾರ್ಯದ ಪ್ರಗತಿಯ ಮಾಹಿತಿ ನೀಡಿದರು. ಸಭೆಯಲ್ಲಿ ಗಣತಿ ವಿಭಾಗದ ಎಲ್ಲ ಚಾರ್ಜ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!