ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ 80 ವರ್ಷದ ವೃದ್ಧನೊಬ್ಬನ ಕಣ್ಣೀರ ಕಥೆಗೆ ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಅವರು ಆಸರೆಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸ್ಥಗಿತಗೊಂಡಿದ್ದ ಪಿಂಚಣಿ ಹಣವನ್ನು ಪೋಲಿಸ್ ಅಧಿಕಾರಿಗಳ ಮುತುವರ್ಜಿಯಿಂದಾಗಿ ಮತ್ತೆ ದೊರೆಯುವಂತಾಗಿದ್ದು, ಇಲಾಖೆಯ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮೋದಗಾ ಗ್ರಾಮದ ನಿವಾಸಿ 80 ವರ್ಷದ ಪುಂಡಲಿಕ ಜೋತೆಪ್ಪ ಲೋಹಾರ್ ಎಂಬುವವರು ಕಳೆದ ಹಲವು ವರ್ಷಗಳಿಂದ ಒಂಟಿ ಜೀವನ ನಡೆಸುತ್ತಾ ಆರ್ಥಿಕ ಸಂಕಷ್ಟದಲ್ಲಿದ್ದರು. ಇವರಿಗೆ ನಾಲ್ವರು ಮಕ್ಕಳಿದ್ದರೂ, ಒಬ್ಬನೇ ಮಗ ಅನಾರೋಗ್ಯದಿಂದ ಮೃತಪಟ್ಟಿದ್ದನು. ಮೂವರು ಹೆಣ್ಣು ಮಕ್ಕಳು ಮಹಾರಾಷ್ಟ್ರದಲ್ಲಿ ವಾಸವಾಗಿದ್ದು, ಪತ್ನಿಯೂ ಕೂಡ ವೈವಾಹಿಕ ಸಮಸ್ಯೆಯಿಂದಾಗಿ ಬೇರೆಯಾಗಿದ್ದರು. ಇಂತಹ ಸಂದರ್ಭದಲ್ಲಿ ಕಳೆದ ಐದು ವರ್ಷಗಳಿಂದ ಆಧಾರ್ ಕಾರ್ಡ್ ಅಪ್ಡೇಟ್ ಇಲ್ಲದ ಕಾರಣ ಇವರ ವೃದ್ಧಾಪ್ಯ ವೇತನ ಸ್ಥಗಿತಗೊಂಡು, ತುತ್ತು ಅನ್ನಕ್ಕೂ ಪರದಾಡುವಂತಾಗಿತ್ತು.

ಈ ಕಷ್ಟದ ಪರಿಸ್ಥಿತಿಯನ್ನು ಗಮನಿಸಿದ ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ಮತ್ತು ಅವರ ತಂಡ ‘ಆಸರೆ ಯೋಜನೆ’ ಅಡಿಯಲ್ಲಿ ಪುಂಡಲಿಕ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಸಮಸ್ಯೆ ಅರಿತ ಜಾವೀದ್ ಮುಶಾಪುರೆ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ, ಮಾನ್ಯ ತಹಶೀಲ್ದಾರರೊಂದಿಗೆ ಪತ್ರ ವ್ಯವಹಾರ ನಡೆಸುವ ಮೂಲಕ ದಾಖಲೆಗಳನ್ನು ಸರಿಪಡಿಸಿದರು. ಸಿಪಿಐ ಅವರ ಈ ವಿಶೇಷ ಆಸಕ್ತಿಯಿಂದಾಗಿ ಏಪ್ರಿಲ್ 2026 ರಿಂದ ಪುಂಡಲಿಕ ಅವರಿಗೆ ವೃದ್ಧಾಪ್ಯ ವೇತನ ಪುನಃ ಪ್ರಾರಂಭವಾಗಿದ್ದು, ಅಶಕ್ತ ವೃದ್ಧನ ಬದುಕಿಗೆ ಪೊಲೀಸ್ ಇಲಾಖೆ ಆಸರೆಯಾಗಿ ನಿಂತಿದೆ.
