BELAGAVI

ಪರಿಶಿಷ್ಟ ಜಾತಿ/ವರ್ಗಗಳ ಜನರ ಸಮಸ್ಯೆಗಳ ಪರಿಹಾರಕ್ಕೆ ಆಯೋಗದಿಂದ ಕಟ್ಟುನಿಟ್ಟಿನ ಕ್ರಮ: ಅಧಕ್ಷ ಡಾ.ಮೂರ್ತಿ.ಎಲ್

Share

ಪರಿಶಿಷ್ಟ ಜಾತಿ, ಪರಿಶುಷ್ಟ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಅನೇಕ ಸಮಸ್ಯೆಗಳಿದ್ದು ಅಂತಹ ಸಮಸ್ಯೆಗಳನ್ನು ಆಯೋಗವು ಆಲಿಸಿ ಅವುಗಳಿಗೆ ಪರಿಹಾರ ಒದಗಿಸಲು ಕಟ್ಟು ನಿಟ್ಟಿನ ಕ್ರಮ‌ವಹಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ‌ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಅವರು ಹೇಳಿದರು.

ಸುವರ್ಣ ವಿಧಾನ ಸೌಧದಲ್ಲಿ ಸೋಮವಾರ(ಏ.27) ಜರುಗಿದ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಂಘ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಮಸ್ಯೆಗಳನ್ನು ಆಲಿಸಿ ಆ ಸಮಸ್ಯೆಗಳನ್ನು ಶಾಶ್ವತಾವಗಿ ಪರಿಹರಿಸುವ ಕಾರ್ಯವನ್ನು ಆಯೋಗದಿಂದ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಸರಕಾರದಿಂದ‌ ಬರುವಂತಹ ಸವಲತ್ತುಗಳು ಪರಿಶಿಷ್ಟ ವರ್ಗದವರಿಗೆ ದೊರಕಬೇಕು. ಪರಿಶಿಷ್ಟ ಜಾತಿ ಹಾಗೂ ಪ.ಪಂಗಡ ಸಮುದಾಯದ ಸ್ಮಶಾನಕ್ಕೆ‌ ಸಂಬಂಧಿಸಿದಂತೆ ಸ್ಥಳ ಮಂಜೂರು ಮಾಡಲು ಆಯೋಗದಿಂದ ಪತ್ರ ಬರೆಯಲಾಗಿದೆ.

ಜಮೀನು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಈ ಕುರಿತು ಜಿಲ್ಲಾಧಿಕಾರಿಗಳ‌ ಅಧ್ಯಕ್ಷತೆಯಲ್ಲಿ ಸಭೆ ಜರುಗಿಸಿ ಪರಿಹಾರ ಕಂಡುಕೊಳ್ಳಲು ಸೂವುಸಲಾಗುವುದು ಎಂದು ತಿಳಿಸಿದರು.

ಎಸ್.ಸಿ‌ಪಿ\ಟಿ.ಎಸ್.ಪಿ ಕಾಮಗಾರ-ಫಲಕ ಅಳವಡಿಕೆಗೆ ಸೂಚನೆ:

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬಿಸದಂತೆ ಆದೇಶ ಹೊರಡಿಸಲಾಗಿದೆ. ಎಸ್.ಸಿ.ಪಿ., ಟಿ.ಎಸ್.ಪಿ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳುಳ್ಳ‌ ಮಾಹಿತಿ ಫಲಕ‌ ಅಳವಡಿಸಲು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ಎಸ್.ಸಿ, ಎಸ್.ಟಿ ಮಕ್ಕಳು‌ ವ್ಯಾಸಂಗ‌ ಮಾಡುತ್ತಿರುವ ಸರಕಾರಿ ಶಾಲೆಗಳನ್ನು ಮುಚ್ಚದಂತೆ ಪತ್ರ ಬರೆಯಲಾಗಿದೆ. ಕಾಡಂಚಿನಲ್ಲಿ ವಾಸಿಸುವ ಜನರಿಗೆ ದೊರಕಬೇಕಾದ ಮೂಲಭೂತ ಸೌಲಭ್ಯ ಹಾಗೂ ಅವರ ಹಕ್ಕುಗಳನ್ನು ಒದಗಿಸಲು ಚರ್ಚಿಸಿ ಕ್ರಮ‌ ಜರುಗಿಸಲಾಗುವುದು.

ಇಂದಿನ ಸಭೆಗಳಲ್ಲಿ ಸ್ವೀಕರಿಸಲಾದ ದೂರು, ನ್ಯೂನತೆಗಳನ್ನು ಗಂಭಿರವಾಗಿ ಪರಿಗಣಿಸಿ ಇವುಗಳಿಗೆ ಸೂಕ್ತ ಪರಿಹಾರವನ್ನು ತ್ವರಿತವಾಗಿ ಒದಗಿಸಲಾಗುವುದು ಅಲ್ಲದೇ ವಿವಿಧ ಜಿಲ್ಲೆಗಳಲ್ಲಿ ಆಲಿಸಿದ ಹಾಗೂ ಸ್ವೀಕರಿಸಲಾದ ಅಹವಾಲುಗಳ ಕುರಿತ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲಿಯೇ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಅನುಸೂಚಿತ ‌ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಾದ ಡಾ.ಮೂರ್ತಿ.ಎಲ್ ಅವರು ತಿಳಿಸಿದರು.

ಸಮಾಜದ ಮುಖಂಡರಾದ ದುರಗೇಶ ಮೇತ್ರಿ ಅವರು ಮಾತನಾಡಿ, ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಇಲಾಖೆಯ ಅಧೀನದಲ್ಲಿನ ವಸತಿ ನಿಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಗ್ರೂ ‘ಡಿ’ ಸಿಬ್ಬಂದಿಗಳ ನೇಮಕಾತಿ‌ ಮಾಡಬೇಕು. ಭೂ ಒಡೆತನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕುವಂತಾಗಬೇಕು ಎಂದು ಸಭೆಗೆ ತಿಳಿಸಿದರು.

ಮಲ್ಲಿಕಾರ್ಜುನ ರಾಶಿಂಗೆ ಅವರು ಮಾತನಾಡಿ ಕಿತ್ತೂರು ಹಾಗೂ ಕಣಗಲಾ ಕೈಗಾರಿಕಾ ಪ್ರದೇಶದಲ್ಲಿ ಪರಿಶಿಷ್ಟರಿಗೆ ಒದಗಿಸುವ ಪ್ರದೇಶವು ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತವಾಗಿರುವುದಿಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಸ್ಮಶಾನ ಭೂಮಿ ದಾಖಲೆಗಳಲ್ಲಿ ನಮೂದಾಗಿದ್ದರು ಸಹ ಸ್ಮಶಾನ ಭೂಮಿ ಇದುವರೆಗೂ ಹಸ್ತಾಂತರಿಸಲಾಗಿರುವುದಿಲ್ಲ. ಸರಕಾರದ ವಿವಿಧ ಕಾಮಗಾರಿಗಳ ಗುತ್ತಿಗೆ ಪರಿಶಿಷ್ಟರಿಗೆ ಇದುವರೆಗೂ ದೊರಕುತ್ತಿಲ್ಲ. ಈ‌ ಕುರಿತು ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ಬ್ಯಾಂಕುಗಳಲ್ಲಿ ಸಾಲ ಪಡೆಯಲು ಸರಳೀಕರಣವಾಗಬೇಕು. ಕುಂದು‌ಕೊರತೆ ಸಭೆಗಳ‌ ಮೂಲಕ ನೊಂದವರಿಗೆ ನ್ಯಾಯ ದೊರಕುವಂತಾಗಬೇಕು ಎಂದು ತಿಳಿಸಿದರು.

ದೀಪಕ ವಾಗೆಲ್ ಅವರು ಮಾತನಾಡಿ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ‌ ವಸತಿ ಸಮುಚ್ಛಯಗಳಲ್ಲಿ ವಾಸಿಸುವರಿಗೆ ಹಕ್ಕು ಪತ್ರ ವಿತರಣೆಯಾಗಬೇಕು. ಮ್ಯಾನುವಲ್ ಸ್ಕ್ಯಾವೇಂಜರುಗಳಿಗೆ ಗುರುತಿನ ಪತ್ರ ವಿತರಣೆ ಹಾಗೂ ಸರಿಯಾದ ಸಮಯಕ್ಕೆ ಸಂಬಳ ದೊರಕುವಂತಾಗಬೇಕು.

ರಾಜು ಕಾಳೇನಟ್ಟಿ ಅವರು‌ ಮಾತನಾಡಿ ತ್ರೈಮಾಸಿಕವಾಗಿ ಜರುಗುವ ದೌರ್ಜನ್ಯ ಸಮಿತಿ ಸಭೆ ಹಾಗೂ ಮ್ಯಾನುವೆಲ್ ಸ್ಕ್ಯಾವೇಂಜರ್ಸ್ ಸಮಿತಿ‌ ಸಭೆಗಳು ಪ್ರತ್ಯೇಕವಾಗಿ ಜರುಗಬೇಕು ಎಂದರು.

ಪ್ರಕಾಶ ಮೈಲಾಚೆ ಅವರು ಮಾತನಾಡಿ ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಸರಕಾರದ ವಿವಿಧ ಯೋಜನೆಗಳಲ್ಲಿ ನಿಗದಿಪಡಿಸುವ ಗುರಿಯನ್ನು ಹೆಚ್ಚಿಸಬೇಕು. ವಿವಿಧ ಕಾಮಗಾರಿಗಳಲ್ಲಿ ಗುತ್ತಿಗೆಯನ್ನು ಪರಿಶಿಷ್ಟರ ಹೆಸರಲ್ಲಿ ‌ಪಡೆದು‌ ಬೇರೆಯವರೂ ಕಾಮಗಾರಿ ನಡೆಸುತ್ತಿರುವ ಕುರಿತು ದೂರುಗಳನ್ನು ನೀಡಲಾಗಿದೆ ಎಂದರು.

ಮಹಾದೇವ ತಳವಾರ ಅವರು ಮಾತನಾಡಿ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದಲ್ಲಿ ಪರಿಶಿಷ್ಟರಿಗೆ ಮಂಜೂರಾದ ಜಾಗೆಯನ್ನು ಬೇರೆಯವರು ಅತಿಕ್ರಮಣ ಮಾಡಿಕೊಂಡಿದ್ದು, ಈ ಕುರಿತು ಹೈಕೋರ್ಟ ಸದರಿ ಸ್ಥಳದಲ್ಲಿ ಅರಣ್ಯ ಪ್ರದೇಶದಲ್ಲಿದೆಯೇ ಎಂಬುದರ ಕುರಿತು ಪರಿಶೀಲಿಸಿ ಹಸ್ತಾಂತರಿಸಲು ಆದೇಶಿಸಿದ್ದರು ಸಹ ಇದುವರೆಗೂ ವರದಿ ನೀಡಿರುವುದಿಲ್ಲ. ಕೆಲ‌ ಗ್ರಾಮ ಪಂಚಾಯತಗಳಲ್ಲಿ ಪರಿಶಿಷ್ಟರ ಅನುದಾನದ‌ ದುರ್ಬಳಕೆಯಾಗಿದ್ದು ಈ ಕುರಿತು ಸಂಬಂಧಿಸಿದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಉದ್ಧಟತನ ತೋರುತ್ತಿರುವ ಕುರಿತು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಹಕ್ಕುಪತ್ರ ವಿರಣೆ, ಕಾಂಚಿನಲ್ಲಿ ವಾಸಿಸುವ ಜನರ ಸಮಸ್ಯೆ‌ ಹಾಗೂ‌ ಮೂಲಭೂತ ಸೌಲಭ್ಯ, ಶಿಕ್ಷಣ, ಪರಿಶಿಷ್ಟರ ಮೇಲೆ‌ ಪೋಲಿಸ ಠಾಣೆಗಳಲ್ಲಿ ಸುಳ್ಳು ಪ್ರಕರಣಗಳ‌ ದಾಖಲೆ, ಜಿಲ್ಲಾ‌ ಮಟ್ಟದಲ್ಲಿ ಗ್ರಂಥಾಲಯ ಸ್ಥಾಪನೆ, ಮನರೇಗಾ ಯೋಜನೆಯಡಿ ಅಕ್ರಮ, ಪೋಲಿಸ್ ಠಾಣೆಗಳಲ್ಲಿ ನಿಯಮಿತವಾಗಿ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆ ಆಯೋಜನೆ, ಕೆಲ‌ ಸರಕಾರಿ‌ ಕಾಲೇಜುಗಳಲ್ಲಿ ಹೆಚ್ಚುವರಿ ಪ್ರವೇಶ ಶುಲ್ಕ ಆಕರಣೆ, ಪರಿಶಿಷ್ಟ ಜಾತಿ, ಪಂಗಡದ ವಿಧ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳ ತರಬೇತಿ ಆಯೋಜನೆ, ಕೊರವ ಸಮಾಜಕ್ಕೆ ಸಮುದಾಯ ಭವನಗಳ ನಿರ್ಮಾಣ, ವಸತಿ ನಿಲಯಗಳಲ್ಲಿ ಉತ್ತಮ‌ ಅಹಾರ ಪೂರೈಕೆ ಸೇರಿದಂತೆ ವಿವಿದ ವಿಷಯಗಳ ಕುರಿತು ಅಹವಾಲುಗಳನ್ನು ಸಲ್ಲಿಸಲಾಯಿತು.

ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ದಿವಾಕರ ಎನ್, ಸುನೀಲ ಉಕ್ಕಲಿ, ಶ್ರೀಮತಿ ಗೀತಾ ಥಾವಂಶಿ, ಕಾರ್ಯದರ್ಶಿ ಡಾ.ಶಿವರಾಮು ಎಚ್.ಎಸ್. ಸಂಶೋಧನಾ ಅಧಿಕಾರಿ ಸಿಂಧೂ ಎಚ್.ಎಸ್. ಪೋಲಿಸ್ ಆಯುಕ್ತ ಭೊರಸೆ ಗುಲಾಬರಾವ್‌ ಭೂಷಣ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗನಾಯಕ, ಸಮಾಜ ಕಲ್ಯಾಣ ಇಲಾಖೆ ಜಂಟಿ‌ನಿರ್ದೆಶಕ ರಾಮನಗೌಡ ಕನ್ನೋಳಿ, ಪರಿಶಿಷ್ಟ ವರ್ಗಗಳ‌ ಜಿಲ್ಲಾ ಅಧಿಕಾರಿ ಬಸವರಾಜ ಕುರಿಹುಲಿ, ಸಮಾಜದ ಮುಖಂಡರಾದ ಮಲ್ಲೇಶ ಚೌಗಲೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಮುದಾಯದ ಗಣ್ಯರು, ಮುಖಂಡರುಗಳು ಉಪಸ್ಥಿತರಿದ್ದರು.

Tags:

error: Content is protected !!