ಕೊಲ್ಲಾಪುರ-ಬೆಳಗಾವಿ-ಖಾನಾಪುರ ಮಾರ್ಗದ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಾಯಗೊಂಡ ಘಟನೆ ಶನಿವಾರ ಖಾನಾಪುರ ತಾಲೂಕಿನ ದೇಸೂರು ಕ್ರಾಸ್ ಬಳಿ ಸಂಭವಿಸಿದೆ.

ಸಾರಿಗೆ ಬಸ್ಸು ವೇಗವಾಗಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದ ಸಂದರ್ಭದಲ್ಲಿ, ಬಸ್ಸಿನ ಬಾಗಿಲ ಬಳಿ ನಿಂತಿದ್ದ ಮಗ ಸ್ನೇಹಿತ ಕಡೋಲಿ ಕೆಳಗೆ ಬಿದ್ದಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ತಾಯಿ ಲಕ್ಷ್ಮೀ ಕಡೋಲಿ ಅವರು ಮಗನ ರಕ್ಷಣೆಗಾಗಿ ತಾವೂ ಕೂಡ ಬಸ್ಸಿನಿಂದ ಕೆಳಕ್ಕೆ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಮಾಧ್ಯಮಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಕಡೋಲಿ ಅವರು, ಖಾನಾಪುರದಿಂದ ಬೆಳಗಾವಿಗೆ ಬರುವಾಗ ಸಾರಿಗೆ ಬಸ್ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದನು. ಇದರಿಂದಾಗಿ ತನ್ನ ಮಗ ಆಯತಪ್ಪಿ ಬಾಗಿಲಿನಿಂದ ಕೆಳಕ್ಕೆ ಬಿದ್ದ ಕೂಡಲೇ ಆತನನ್ನು ರಕ್ಷಿಸಲು ತಾನು ಜಿಗಿಯಬೇಕಾಯಿತು ಎಂದು ತಿಳಿಸಿದ್ದಾರೆ.
ಇದೇ ವಿಷಯವಾಗಿ ಚಾಲಕ ದೇವರಾಜ ಕಾಶಿನಾಥ ಪ್ರತಿಕ್ರಿಯಿಸಿ, ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಬಾಗಿಲ ಬಳಿ ನಿಲ್ಲದೆ ಒಳಗಡೆ ಬರುವಂತೆ ಕಂಡಕ್ಟರ್ ಪ್ರಯಾಣಿಕರಿಗೆ ಸೂಚನೆ ನೀಡಿದ್ದರು. ಆದರೆ ಅವರು ಬಾಗಿಲಿನಲ್ಲೇ ನಿಂತಿದ್ದರಿಂದ ದೇಸೂರು-ದೇಶನೂರ ಬಳಿ ಯುವಕ ಕೆಳಕ್ಕೆ ಬಿದ್ದಿದ್ದಾನೆ, ಬಳಿಕ ಆತನ ತಾಯಿಯೂ ಜಿಗಿದಿದ್ದಾರೆ. ಈ ಘಟನೆಯಲ್ಲಿ ನಮ್ಮ ಚಾಲನೆಯ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
