Hukkeri

ಹುಕ್ಕೇರಿ: ವಿದ್ಯಾರ್ಥಿಗಳ ಸಾಧನೆಗಳೇ ಗೆಲುವಿನ ಮೆಟ್ಟಿಲು – ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ

Share

ವಿದ್ಯಾರ್ಥಿಗಳ ಸಾಧನೆಗಳೇ ಜೀವನದ ಗೆಲುವಿನ ಮೆಟ್ಟಿಲುಗಳಾಗುತ್ತವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ವಿಭಾಗದ ಅಪರ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಅವರು ಹೇಳಿದರು.

ಹುಕ್ಕೇರಿ ನಗರದ ಬಾಪೂಜಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ, ಡಾಡ್ಜ್ ಬಾಲ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಬಾಪೂಜಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 18ನೇ ರಾಷ್ಟ್ರ ಮಟ್ಟದ ಡಾಡ್ಜ್ ಬಾಲ್ ಪಂದ್ಯಾವಳಿಯ ಭವ್ಯ ಪ್ರಾರಾಂಭೋತ್ಸವವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ, ವೀರಕ್ತಮಠದ ಶ್ರೀ ಶಿವಬಸವ ಮಹಾಸ್ವಾಮಿಗಳ ಹಾಗೂ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈಶ್ವರ ಉಳ್ಳಾಗಡ್ಡಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕರ್ನಾಟಕ ಡಾಡ್ಜ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಡಿ. ವೆಂಕಟೇಶ ಮೂರ್ತಿ, ಕಾರ್ಯದರ್ಶಿ ಪಿ. ಎಸ್. ಬ್ರಾರ, ಜಿಲ್ಲಾ ಕಾರ್ಯದರ್ಶಿ ಶ್ರೀಶೈಲ ಕೌಜಲಗಿ, ಚಿಕ್ಕೋಡಿ ಶಿಕ್ಷಣ ಜಿಲ್ಲೆಯ ಉಪನಿರ್ದೇಶಕರಾದ ಆರ್. ಎಸ್. ಸಿತಾರಾಮು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಉಪಸ್ಥಿತರಿದ್ದರು. ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಈಶ್ವರ ಉಳ್ಳಾಗಡ್ಡಿ ಅವರು, ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳುವ ಕೌಶಲ್ಯಾಧರಿತ ಸಾಧನೆಗಳು ಅವರ ಮುಂದಿನ ಜೀವನದ ಗೆಲುವಿನ ಮೆಟ್ಟಿಲುಗಳಾಗುತ್ತವೆ, ಆದ್ದರಿಂದ ವಿದ್ಯಾರ್ಥಿಗಳು ಪೂರ್ಣ ಆತ್ಮವಿಶ್ವಾಸದಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ಆಯುಕ್ತರನ್ನು ಬಾಪೂಜಿ ಶಿಕ್ಷಣ ಸಂಸ್ಥೆ, ಶಿಕ್ಷಣ ಇಲಾಖೆ ಹಾಗೂ ಮಹಾಸ್ವಾಮಿಗಳ ವತಿಯಿಂದ ಸತ್ಕರಿಸಿ ಅಭಿನಂದಿಸಲಾಯಿತು.

ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಂಜೀವಕುಮಾರ ನವಲಗುಂದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಡಾಡ್ಜ್ ಬಾಲ್ ಕ್ರೀಡೆಯು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಆಟವಾಗಿದ್ದು, ಈಗ 18ನೇ ರಾಷ್ಟ್ರ ಮಟ್ಟದ ಪಂದ್ಯಾವಳಿಗಳು ಗ್ರಾಮೀಣ ಪ್ರದೇಶವಾದ ಹುಕ್ಕೇರಿ ತಾಲೂಕಿನ ಮಸರಗುಪ್ಪಿ ಗ್ರಾಮದ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು. ಈ ಕ್ರೀಡಾಕೂಟದಲ್ಲಿ ದೇಶದ ಸುಮಾರು 20 ರಾಜ್ಯಗಳಿಂದ 35 ತಂಡಗಳು ಭಾಗವಹಿಸಿವೆ ಎಂದು ಅವರು ಮಾಹಿತಿ ನೀಡಿದರು. ನಂತರ ಕ್ರೀಡಾಪಟುಗಳಿಗೆ ಶುಭ ಕೋರಿ ಪಂದ್ಯಗಳನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಮಹಾಂತೇಶ ಬಸ್ಸಾಪೂರೆ, ಜಾವೇದ್ ಮುಷಾಪುರೆ, ಎ. ಎಸ್. ಗುದಿಗೊಪ್ಪ, ಪ್ರಾಚಾರ್ಯರಾದ ಎಚ್. ವೈ. ಸಂಕಣ್ಣವರ, ಲೀಲಾವತಿ ಹಿರೇಮಠ, ಆಡಳಿತಾಧಿಕಾರಿ ಬಸವರಾಜ ಅಮ್ಮಣಗಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮತ್ತು ಕ್ರೀಡಾಪಟುಗಳು ಉಪಸ್ಥಿತರಿದ್ದರು.

Tags:

error: Content is protected !!