hukkeri

ಹುಕ್ಕೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರು ಸೇರಿ ಐವರು ಕಿರಾತಕರ ಬಂಧನ; 15.45 ಲಕ್ಷ ಮೌಲ್ಯದ ಸ್ವತ್ತು ವಶ

Share

1. ಹುಕ್ಕೇರಿ ಪೊಲೀಸರ ಭರ್ಜರಿ ಬೇಟೆ; ಆರೋಪಿಗಳ ಬಂಧನ
2. 15 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ವಶ
3. ಅಂತರರಾಜ್ಯ ಬೈಕ್ ಕಳ್ಳರ ಜಾಲ ಪತ್ತೆ ಹಚ್ಚಿದ ತಂಡ
4. ಮಹಾಂತೇಶ್ ಬಸ್ಸಾಪೂರೆ ಮತ್ತು ತಂಡಕ್ಕೆ ಎಸ್ಪಿ ಶ್ಲಾಘನೆ

ನಮಸ್ಕಾರ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬೈಕ್‌ಗಳು, ಚಿನ್ನದ ಸರಗಳು ಹಾಗೂ ಟ್ರ್ಯಾಕ್ಟರ್ ಟ್ರೈಲರ್ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ರಾಮರಾಜನ್ ಮತ್ತು ಅಡಿಷನಲ್ ಎಸ್ಪಿ ರಾಮಗೊಂಡ ಬಸರಗಿ ಅವರ ಮಾರ್ಗದರ್ಶನದಲ್ಲಿ ಹುಕ್ಕೇರಿ ಇನ್ಸ್‌ಪೆಕ್ಟರ್ ಮಹಾಂತೇಶ್ ಬಸ್ಸಾಪೂರೆ ನೇತೃತ್ವದ ತಂಡ ಈ ಪ್ರಮುಖ ಕಾರ್ಯಾಚರಣೆ ನಡೆಸಿದೆ. ಅಂತರರಾಜ್ಯ ಬೈಕ್ ಕಳ್ಳತನ ಮಾಡುತ್ತಿದ್ದ ಉಮೇಶ ಹನುಮಂತ ಗಾಡಿವಡ್ಕರನನ್ನು ಬಂಧಿಸಿ, ಆತನಿಂದ ಮೀರಜ್, ಬೆಳಗಾವಿ, ಗೋಕಾಕ ಸೇರಿದಂತೆ ವಿವಿಧೆಡೆ ಕಳವು ಮಾಡಿದ್ದ 6 ಲಕ್ಷ ರೂ. ಮೌಲ್ಯದ 9 ಮೋಟಾರ್ ಸೈಕಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಷ್ಟೇ ಅಲ್ಲದೆ, ಮಹಾರಾಷ್ಟ್ರ ಮೂಲದ ದೀಪಕ ಮಚ್ಛೇಂದ್ರ ಜಾಧವ ಎಂಬಾತನನ್ನು ಬಂಧಿಸಿ 4.50 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ರಿಕವರಿ ಮಾಡಲಾಗಿದೆ.
ಇನ್ನುಳಿದಂತೆ ಟ್ರ್ಯಾಕ್ಟರ್ ಟ್ರೈಲರ್ ಕಳ್ಳತನ ಮಾಡಿದ್ದ ಹೊನಗಾದ ಅರ್ಜುನ ಬಸವಂತ ಶೇಂದ್ರಿ ಹಾಗೂ ಬಸ್ಸಿನಲ್ಲಿ ಪ್ರಯಾಣಿಕರ ಆಭರಣ ಕದಿಯುತ್ತಿದ್ದ ನಿಪ್ಪಾಣಿಯ ಆರತಿ ಲೊಂಡ ಮತ್ತು ಪೂಜಾ ಚೌಗಲೆ ಎಂಬುವವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕೋಟಬಾಗಿಯ ಮುತ್ತಪ್ಪ ಕಾಮಶೆಟ್ಟಿ ಎಂಬಾತನಿಂದ 50 ಸಾವಿರ ಮೌಲ್ಯದ ಆಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ 15 ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, 15.45 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದು, ಈ ಯಶಸ್ವಿ ಕಾರ್ಯಾಚರಣೆಗೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.

Tags:

error: Content is protected !!