1. ಬಂಬರಗೆಯಲ್ಲಿ ಸಡಗರದಿಂದ ಜರುಗಿದ ದೇವಿಯ ಜಾತ್ರೆ
2. ವೈಭವದ ರಥೋತ್ಸವ ಕಂಡು ಭಕ್ತರು ಮಂತ್ರಮುಗ್ಧ
3. ದೇವಿಯ ಕಲ್ಯಾಣ ಮಹೋತ್ಸವಕ್ಕೆ ಹರಿದುಬಂದ ಭಕ್ತಸಾಗರ
4. 26 ವರ್ಷಗಳ ನಂತರ ಗ್ರಾಮದಲ್ಲಿ ಹಬ್ಬದ ಸಂಭ್ರಮ

ಬೆಳಗಾವಿ ತಾಲೂಕಿನ ಬಂಬರಗೆ ಗ್ರಾಮದಲ್ಲಿ ಬರೋಬ್ಬರಿ 26 ವರ್ಷಗಳ ನಂತರ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಆರಂಭಿಕ ವಿಧಿವಿಧಾನಗಳು ಅತ್ಯಂತ ವೈಭವದಿಂದ ನೆರವೇರಿದವು. ಬುಧವಾರ ಮುಂಜಾನೆ ನಡೆದ ದೇವಿಯ ಕಲ್ಯಾಣ ಮಹೋತ್ಸವ ಹಾಗೂ ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಭಂಡಾರದಲ್ಲಿ ಮಿಂದೆದ್ದರು.
ಬೆಳಗಾವಿ ಜಿಲ್ಲೆಯ ಬಂಬರಗೆ ಗ್ರಾಮದಲ್ಲಿ 26 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವವು ಏಪ್ರಿಲ್ 21 ರಿಂದ ಸಂಭ್ರಮದ ಚಾಲನೆ ಪಡೆದುಕೊಂಡಿತ್ತು. ಆರಂಭದ ದಿನ ದೇವಿಗೆ ವಿಶೇಷ ಸಿಹಿ ನೈವೇದ್ಯ ಅರ್ಪಿಸಿ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ತದನಂತರ ಬುಧವಾರ ಮುಂಜಾನೆ 6:15ರ ಶುಭ ಮುಹೂರ್ತದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ವಿವಾಹ ಮಹೋತ್ಸವವು ಶಾಸ್ತ್ರೋಕ್ತವಾಗಿ ನೆರವೇರಿತು. ಈ ಮಂಗಳ ಕಾರ್ಯದ ನಂತರ ದೇವಿಯನ್ನು ರಥದ ಮೇಲೆ ಕುಳ್ಳಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯುದ್ದಕ್ಕೂ ಮಂಗಳ ವಾದ್ಯಗಳ ನಿನಾದ ಹಾಗೂ ಭಕ್ತರ ಜಯಘೋಷಗಳು ಮೊಳಗಿದವು. ಸಂಜೆ ವೇಳೆಗೆ ದೇವಿಯನ್ನು ಗದಿಗೆಯ ಮೇಲೆ ಪ್ರತಿಷ್ಠಾಪಿಸಲಾಯಿತು. ಗ್ರಾಮಸ್ಥರ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. 26 ವರ್ಷಗಳ ಬಳಿಕ ನಡೆದ ಈ ಉತ್ಸವದಲ್ಲಿ ಭಾಗಿಯಾಗಲು ದೂರದೂರುಗಳಿಂದ ಭಕ್ತರು ಆಗಮಿಸಿದ್ದು ವಿಶೇಷವಾಗಿತ್ತು. ಏಪ್ರಿಲ್ 29ರಂದು ಸೀಮೆಯಕಡೆಗೆ ಮೆರವಣಿಗೆ ಸಾಗುವ ಮೂಲಕ ಈ ಒಂಬತ್ತು ದಿನಗಳ ಐತಿಹಾಸಿಕ ಉತ್ಸವ ಸಂಪನ್ನಗೊಳ್ಳಲಿದೆ.
