ಬೆಳಗಾವಿ ಜಿಲ್ಲೆಯಲ್ಲಿ ಸದ್ಯಕ್ಕಿಲ್ಲ ನೀರಿನ ಕ್ಷಾಮ
ರಾಕಸಕೊಪ್ಪ ಜಲಾಶಯದಲ್ಲಿ ಎರಡು ತಿಂಗಳ ನೀರು
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ನೀರು ಬಿಡಲು ಮನವಿ
ಬಿಸಿಗಾಳಿ ಬಗ್ಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

ಬೆಳಗಾವಿ ಜಿಲ್ಲೆ ಹಾಗೂ ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆಯಾದರೆ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಪಂನಿಂದ ನೀರಿನ ಟ್ಯಾಂಕರ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಬೋರವೆಲ್ ನಿಂದ ನೀರಿನ ಸರಬರಾಜು ಮಾಡಲಾಗುವುದು ಎಂದರು.
ಬೆಳಗಾವಿ ನಗರದಲ್ಲಿ ಸದ್ಯಕ್ಕೆ ನೀರಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿಲ್ಲ. ರಾಕಸಕೊಪ್ಪ ಡ್ಯಾಂನಲ್ಲಿ ಇನ್ನೂ ಎರಡು ತಿಂಗಳು ಕುಡಿಯುವ ನೀರಿನ ಮಟ್ಟ ಇದೆ ಎಂದರು.
ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೀರ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.
ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ನೀರು ಇದೆ. ಅದನ್ನು ಎಲ್ಲಿಯವರೆಗೆ ಬಳಸಬಹುದು ಎಂಬುದರ ಕುರತು ಸಭೆ ಮಾಡಿದ್ದೇವೆ.
ಹಿಪ್ಪರಗಿ ಜಲಾಶಯದಲ್ಲಿ 6 ಟಿಎಂಸಿ ಪೈಕಿ 2 ಟಿಎಂಸಿ ನೀರು ಉಳಿದಿದೆ. ಅದನ್ನು ಕುಡಿಯುವ ನೀರಿಗೆ ಆದ್ಯತೆ ನೀಡಿ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಿಎಂ ಅವರಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ರಾಜಾಪುರ ಬ್ಯಾರೆಜ್ ಮೂಲಕ ಕೃಷ್ಣಾ ನದಿಗೆ ನೀರು ಬಿಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದರು.
ಘಟಪ್ರಭಾ ನದಿ ಸೇರಿದಂತೆ ಎಡದಂಡೆ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸುತ್ತಿದ್ದೇವೆ. ಅಲ್ಲಿ ಕಾಮಗಾರಿ ಆಗುತ್ತಿರುವುದರಿಂದ 10 ದಿನ ಸಮಯ ತೆಗೆದುಕೊಂಡು ಬಳಿಕ ನೀರು ಹರಿಸಲಾಗುವುದು ಎಂದರು.
ಮಲಪ್ರಭಾ ನದಿ ನೀರು ಧಾರವಾಡ ಎತ ನೀರಾವರಿ ಯೋಜನೆಗೆ, ರೋಣಗೆ ಹೊಗುತ್ತದೆ. ಇದನ್ನು ನೀರು ಬಿಡುವುದನ್ನು ಪ್ರಾರಂಭಿಸಿದ್ದೇವೆ ಎಂದರು
ರಾಜ್ಯದಲ್ಲಿ ಬಿಸಿ ಗಾಳಿಯಿಂದ ಜನರು ಎಚ್ಚರಿಕೆಯಿಂದ ಇರಬೇಕು.ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮಧ್ಯಾಹ 1 ರಿಂದ 2 ಗಂಟೆಯವರೆಗೆ ಜನರು ಹೊರಗಡೆ ಬರದಂತೆ ಜಾಗರೂಕತೆ ವಹಿಸಬೇಕು. ಕುಡಿಯುವ ನೀರಿನಲ್ಲಿ ಉಪ್ಪು ಹಾಗೂ ಸಕ್ಕರೆ ಬೆರೆಸಿ ಸೇವನೆ ಮಾಡಬೇಕು. ಈಗಾಗಲೇ ಜಿಲ್ಲಾಡಳಿತ ಮಹಾನಗರ ಪಾಲಿಕೆ ಹಾಗೂ ಪುರಸಭೆಗಳಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.
