Chikkodi

ಕುಡಿಯುವ ನೀರು ಪೂರೈಕೆಗೆ ಹಸಿರು ನಿಶಾನೆ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರಿಗೆ ಬ್ಲ್ಯಾಕ್ ಲಿಸ್ಟ್ ಭೀತಿ

Share

• ಕೃಷ್ಣಾ ನದಿ ನೀರು ಪೂರೈಕೆಗೆ ಹೆಸ್ಕಾಂ ಸಾಥ್
• ಚಿಕ್ಕೋಡಿಯಲ್ಲಿ ಶಾಸಕ ಗಣೇಶ್ ಹುಕ್ಕೇರಿ ಗರಂ!

 

ಬೇಸಿಗೆ ಕಾಲದಲ್ಲಿ ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಿ ಅಧಿಕಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಸೂಚನೆ

ಚಿಕ್ಕೋಡಿ-ಚಿಕ್ಕೋಡಿ, ಸದಲಗಾ, ಯಕ್ಸಂಬಾ ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಬೇಸಿಗೆಕಾಲದಲ್ಲಿ ಕುಡಿಯುವ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕ ಗಣೇಶ ಹುಕ್ಕೇರಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ನೂತನ ಪುರಸಭೆ ಕಚೇರಿ ಸಭಾಭವನದಲ್ಲಿ ಚಿಕ್ಕೋಡಿ ತಾಲ್ಲೂಕಿನ ಕುಡಿಯುವ ನೀರು, ಮೇವು ಪೂರೈಕೆ ಹಾಗೂ ಹವಾಮಾನ ವೈಪರಿತ್ಯ ವಿಷಯದ ಕುರಿತು ಶನಿವಾರ ಕರೆದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ಎರಡು ತಿಂಗಳ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಭಾರದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಯಾವುದೇ ಲೋಪಗಳು ಆದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.

ಚಿಕ್ಕೋಡಿ ಪಟ್ಟಣಕ್ಕೆ ಬೇಸಿಗೆ ಅವಧಿಯಲ್ಲಿ ನೀರು ಪೂರೈಕೆ ಮಾಡಲು ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಆಗಾಗ ವಿದ್ಯುತ್ ಕೈಕೊಡುವದರಿಂದ ಸಮರ್ಪಕವಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಈ ಕುರಿತು ಕ್ರಮ ಕೈಗೊಂಡಲ್ಲಿ ಪಟ್ಟಣಕ್ಕೆ ಕೃಷ್ಣಾ ನದಿಯಿಂದ ನೀರು ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದು ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ ಸಭೆಯ ಗಮನಕ್ಕೆ ತಂದರು.

ಹೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸುಖಸಾರೆ ಅವರು ಮಾತನಾಡಿ, ಕುಡಿಯುವ ನೀರು ಪೂರೈಕೆ ಮಾಡಲು ಬಳಸುವ ವಿದ್ಯುತ್ ಮಾರ್ಗದಲ್ಲಿ ಸಮಸ್ಯೆ ಇದ್ದು, ಕೂಡಲೇ ಇದನ್ನು ಸರಿಪಡಿಸಲಾಗುವುದು” ಎಂದು ಉತ್ತರಿಸಿದರು.

ಯಕ್ಸಂಬಾ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಮಾತನಾಡಿ, ಯಕ್ಸಂಬಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 5 ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಕುರಿತು ಕ್ರಮ ಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ” ಎಂದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ಮಾತನಾಡಿ, ಜಲಜೀವನ ಮಿಷನ್, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಸೇರಿದಂತೆ ನೀರು ಪೂರೈಕೆಯ ಯೋಜನೆಗಳನ್ನು ಗುತ್ತಿಗೆದಾರರು ಸರಿಪಡಿಸಿ ನೀರು ಪೂರೈಕೆಗೆ ಅನುಕೂಲ ಮಾಡಿಕೊಡಬೇಕು. ನಿರ್ಲಕ್ಷ್ಯ ತೋರಿದ ಗುತ್ತಿಗೆದಾರರ ಹೆಸರುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು” ಎಂದು ಕಿಡಿಕಾರಿದರು.

ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಪುರಸಭೆಯ ಮುಖ್ಯಾಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಇರುವ ಸಮಸ್ಯೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಚಿಕ್ಕೋಡಿ ತಹಶೀಲ್ದಾರ ರಾಜೇಶ ಬುರ್ಲಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ ಹುಕ್ಕೇರಿ, ಚಿಕ್ಕೋಡಿ ವಿಭಾಗದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಹಾಗೂ ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಪಾಂಡುರಂಗರಾವ್ ಸೇರಿದಂತೆ ಹಲವು ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Tags:

error: Content is protected !!